ನವದೆಹಲಿ, ಡಿ 11 (Daijiworld News/MB) : ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತದಲ್ಲಿ ಧಾರ್ಮಿಕ ವಿಭಜನೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಶಶಿ ತರೂರ್, "ಅಮಿತ್ ಶಾ ಅವರು ವಿದ್ಯಾರ್ಥಿಯಾಗಿದ್ದಾಗ ಇತಿಹಾಸ ತರಗತಿಯನ್ನು ಗಮನವಿಟ್ಟು ಕೇಳುತ್ತಿರಲಿಲ್ಲ ಅನಿಸುತ್ತದೆ" ಎಂದು ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದಾಗ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಈ ದೇಶವನ್ನು ಧಾರ್ಮಿಕತೆಯ ಆಧಾರದಲ್ಲಿ ವಿಭಜನೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ್ದರು.
ಲೋಕಮಾತ್ ನ್ಯಾಷನಲ್ ಸಭೆಯಲ್ಲಿ "ಭಾರತದ ರಾಜಕೀಯದಲ್ಲಿ ಸ್ಥಳೀಯ ಪಕ್ಷಗಳ ಪಾತ್ರ"ದ ಕುರಿತು ಮಾತನಾಡಿದ ತರೂರ್, ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಎರಡು ದೇಶದ ಸಿದ್ಧಾಂತವನ್ನು ಅಪಾರವಾಗಿ ಸಮರ್ಥಿಸಿಕೊಂಡಿದ್ದವು. ಬಹುಪಾಲು ಜನರು ಹಿಂದಿ ಭಾಷೆ ಮಾತನಾಡಬೇಕು, ಹಿಂದುತ್ವ ಪ್ರಚಾರ ಮಾಡಬೇಕು, ಹಿಂದೂಸ್ತಾನವಾಗಬೇಕು ಎಂಬ ಬಿಜೆಪಿಯ ಹೇರಿಕೆಗೆ ಸ್ಥಳೀಯ ಪಕ್ಷಗಳು ಆಳುತ್ತಿರುವ ರಾಜ್ಯಗಳು ವಿರೋಧ ಮಾಡುತ್ತಿದೆ" ಎಂದು ಹೇಳಿದ್ದಾರೆ.
"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವೊಂದೇ ಅಖಂಡ ಭಾರತದ ಪ್ರತಿನಿಧಿಯಾಗಿ ನಿಂತುಕೊಂಡಿದ್ದು. ಆಗಿನ ಸಂದರ್ಭದಲ್ಲಿ ಕಾಂಗ್ರೆಸ್ ಗೆ ವಿರುದ್ಧವಾದದ್ದು ಹಿಂದೂ ಮಹಾಸಭಾ ಮಾತ್ರ, ಹಿಂದೂ ಮಹಾಸಭಾ 1935ರಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ಎರಡು ಪ್ರತ್ಯೇಕ ದೇಶ ಬೇಕೆಂದು ನಿರ್ಧರಿಸಿತು, ಇನ್ನು ಮೊಹಮ್ಮದ್ ಆಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಸಹ ಇದೇ ಸಿದ್ಧಾಂತವನ್ನು ಮುಂದಿಟ್ಟಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದವರು ಮೌಲಾನಾ ಆಜಾದ್ ಎಂಬ ಮುಸ್ಲಿಮರು. ಅಮಿತ್ ಶಾ ಅವರು ವಿದ್ಯಾರ್ಥಿಯಾಗಿದ್ದಾಗ ಇತಿಹಾಸ ತರಗತಿಯನ್ನು ಗಮನವಿಟ್ಟು ಕೇಳುತ್ತಿರಲಿಲ್ಲ ಅನಿಸುತ್ತದೆ" ಎಂದು ವ್ಯಂಗ್ಯ ಮಾಡಿದ್ದಾರೆ.
"ಎಲ್ಲ ವಿಷಯಕ್ಕೂ ಕಾಂಗ್ರೆಸ್ ಕಾರಣ ಎಂದು ಹೇಳುವುದು ಬಿಜಿಪಿಯವರ ಚಾಳಿ. ನಾಳೆ ದೆಹಲಿಯಲ್ಲಿ ಹವಾಮಾನ ಕೆಟ್ಟರೂ ಕಾಂಗ್ರೆಸ್ ಹಾಗೂ ನೆಹರು ಅವರಿಂದ ಹವಾಮಾನ ಕೆಟ್ಟಿದೆ ಎಂದು ಹೇಳುತ್ತಾರೆ' ಎಂದು ಆರೋಪ ಮಾಡಿದರು.
'ಹಿಂದಿ ಭಾಷೆ ಹೇರಿಕೆಯನ್ನು ದಕ್ಷಿಣ ಭಾರತದ ಜನರು ಒಪ್ಪುವುದಿಲ್ಲ ಎಂದು ಬಿಜೆಪಿಗೆ ಮನದಟ್ಟಾಗಿದೆ. ಇನ್ನು ಹಿಂದುತ್ವ ಅಜೆಂಡಾವನ್ನು ಸಹ ದಕ್ಷಿಣ ಭಾರತದ ಅನೇಕ ಶಾಲೆಗಳಲ್ಲಿ ಒಪ್ಪುವುದಿಲ್ಲ" ಎಂದರು.
ಹಾಗೆಯೇ "ಬಿಜೆಪಿ ಸರ್ಕಾರ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ನಾಗರಿಕ ದಾಖಲಾತಿ ಸ್ಥಳೀಯ ಪಕ್ಷಗಳಿಂದ ಆಳಲ್ಪಡುತ್ತಿರುವ ರಾಜ್ಯಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ" ಎಂದು ತಿಳಿಸಿದ್ದಾರೆ.