ಭೋಪಾಲ್, ಡಿ 11 (Daijiworld News/MB) : ವಿವಾಹಕ್ಕೂ ಮುನ್ನ ವಧು ಮತ್ತು ವರ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ಆದ್ದರಿಂದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದವರನ್ನು ಸಮುದಾಯದಿಂದ ಹೊರಹಾಕುತ್ತೇವೆ ಎಂದು ಬೆದರಿಕೆ ಹಾಕಿರುವ ಮಧ್ಯಪ್ರದೇಶದ ಗುಜರಾತಿ, ಜೈನ್ ಮತ್ತು ಸಿಂಧಿ ಸಮುದಾಯದವರು ಪ್ರೀ ವೆಡ್ಡಿಂಗ್ ಫೋಟೋಶೂಟ್ ನಿಷೇಧ ಮಾಡಿದ್ದಾರೆ.
ಈ ಸಮುದಾಯಗಳ ತಿರ್ಮಾನಕ್ಕೆ ಬೆಂಬಲ ನೀಡಿರುವ ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಸಚಿವ ಪಿಸಿ ಶರ್ಮಾ, "ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಮ್ಮ ಸಂಸ್ಕೃತಿ ಅಲ್ಲ. ಸಾಮಾಜಿಕ ದೃಷ್ಟಿಕೋನದಿಂದ ನಾನು ಇಲ್ಲಿನ ಜನರು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಿಷೇಧ ಮಾಡಿರುವುದು ಒಳ್ಳೆಯದು. ಮದುವೆಯಾದರೆ ವಿವಾಹ ಹೆಚ್ಚು ಯಶಸ್ವಿಯಾಗುತ್ತದೆ ಮತ್ತು ಸಂತೋಷದಾಯಕವಾಗಿ ಇರುತ್ತದೆ ಎಂಬುದು ಜನರ ಹಿಂದಿನ ಸಂಸ್ಕೃತಿ ಮತ್ತು ಹಳೆಯ ಸಂಪ್ರದಾಯ ಎಂದು ಹೇಳಿದ್ದಾರೆ.
ಹಾಗೆಯೇ ಗುಜರಾತಿ ಸಮುದಾಯದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪಾಟೀಲ್, "ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ಒಂದು ತಪ್ಪು ಕಲ್ಪನೆಯಾಗಿದೆ. ನಿಶ್ಚಿತಾರ್ಥ ನಡೆದ ಬಳಿಕ ಎಷ್ಟೋ ವಿವಾಹಗಳು ಮುರಿದು ಬೀಳುತ್ತದೆ. ಹಾಗಾಗಿ ಇದನ್ನು ನಾವು ತಡೆಯಬೇಕು ಎಂದು ಸಮಾಜದ ನಿರ್ಧಾರವನ್ನು ಸಮರ್ಥನೆ ಮಾಡಿದ್ದಾರೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಿಂಧಿ ಸಮಾಜದ ಅಧ್ಯಕ್ಷ ಭಗವಾನ್ ದಾಸ್ ಇಸ್ರಾನಿ ಅವರು, " ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುವುದನ್ನು ನಮ್ಮ ಸಮುದಾಯದಲ್ಲಿಯೂ ನಿಷೇಧಿಸಿದ್ದೇವೆ. ನಮ್ಮ ಸಮುದಾಯದವರಿಗೆ ಈ ನಿಯಮವನ್ನು ಪಾಲಿಸಲು ತಿಳಿಸಿದ್ದೇವೆ" ಎಂದು ಹೇಳಿದ್ದಾರೆ.
"ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅನ್ನು ಅಶ್ಲೀಲ ಎಂದು ನಮ್ಮ ಸಮಾಜದ ಆಧ್ಯಾತ್ಮಿಕ ಗುರುಗಳು ಹೇಳಿದ ಬಳಿಕ ನಾವು ನಮ್ಮ ಸಮಾಜದಲ್ಲಿ ಅದನ್ನು ನಿಷೇಧ ಮಾಡಿದ್ದೇವೆ" ಎಂದು ಭೋಪಾಲ್ ಜೈನ ಸಮಾಜದ ಅಧ್ಯಕ್ಷರಾದ ಪ್ರಮೋದ್ ಹಿಮಾಂಶು ತಿಳಿಸಿದ್ದಾರೆ.
ಕಳೆದ ವರ್ಷ ಚತ್ತೀಸ್ಗಢದ ಸಿಂಧಿ ಮತ್ತು ಮಹೇಶ್ವರಿ ಸಮುದಾಯಗಳು ಇದೇ ರೀತಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡ ಬಾರದು ಎಂದು ನಿಷೇಧ ಹೇರಿದ್ದವು.