ಬೆಂಗಳೂರು, ಡಿ 11 (Daijiworld News/MB) : ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ದೆಹಲಿಗೆ ಬರುವಂತೆ ಕರೆ ನೀಡಿದ್ದು ರಾಜ್ಯದ ಕಾಂಗ್ರೆಸ್ನಲ್ಲಿ ಬದಲಾವಣೆಯ ಸಾಧ್ಯತೆ ಕಂಡು ಬಂದಿದೆ.
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದರೂ ಸದ್ಯಕ್ಕೆ ಆ ಸ್ಥಾನ ಬೇಡ ಎಂದು ನಿರ್ಧಾರ ಮಾಡಿದ್ದರು. ಆದರೆ ಹೈಕಮಾಂಡ್ ತನ್ ಪಟ್ಟುಬಿಡದೆ ಡಿಕೆಶಿಯನ್ನು ದೆಹಲಿಗೆ ಕರೆದಿದ್ದು ಇಂದು ಸಂಜೆ ಡಿಕೆಶಿ ದೆಹಲಿಗೆ ತೆರಳಲಿದ್ದಾರೆ.
ಹೈಕಮಾಂಡ್ ಡಿಕೆಶಿಯನ್ನು ಕೆಪಿಸಿಸಿ ಅಧ್ಯಕ್ಷ ಪಟ್ಟಕೇರಿಸುವ ಪ್ರಯತ್ನದಲ್ಲಿದ್ದು ಹೈಕಮಾಂಡ್ ಡಿಕೆಶಿಯ ಮನವೊಳಿಸುವಲ್ಲಿ ಸಫಲವಾಗುತ್ತಾ? ಡಿಕೆಶಿ ಪಟ್ಟ ಏರುತ್ತಾರ? ಎನ್ನುವುದೇ ಒಂದು ಕುತೂಹಲ ಮನೆ ಮಾಡಿದೆ.
ಈ ಹಿಂದೆ ದೆಹಲಿಯಲ್ಲಿದ್ದ ಸಂದರ್ಭದಲ್ಲಿ ಈ ಕುರಿತು ಡಿಕೆಶಿ ನಗುತ್ತಾ ಪ್ರತಿಕ್ರಿಯೆ ನೀಡಿ, "ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ. ನನ್ನ ಹೆಸರನ್ನು ಸುಮ್ಮನೆ ಟಿವಿಯಲ್ಲಿ ಹಾಕ್ತೀರಿ. ನೀವು ಹೇಗೆ ಮಾಡಿ ನನಗೆ ಯಾವ ಹುದ್ದೆಯೂ ಸಿಗದಂತೆ ಮಾಡ್ತೀರಿ" ಎಂದು ಹೇಳಿದ್ದರು.
2 ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತಾ ಎಂದು ಮಾಧ್ಯಮದವರು ಕೇಳಿದ್ದಾಗ ಕುಪಿತಗೊಂಡು "ನಿಮಗೆ ಹಾಗೆ ಯಾರು ಹೇಳಿದ್ದಾರೆ. ಸುಮ್ಮನೆ ಊಹಾಪೋಹ ಸೃಷ್ಟಿ ಮಾಡಬೇಡಿ. ಆ ವಿಚಾರವೆಲ್ಲಾ ಹೈಕಮಾಂಡ್ಗೆ ಬಿಟ್ಟದ್ದು. ಸದ್ಯಕ್ಕೆ ಅಧ್ಯಕ್ಷರ ಬದಲಾವಣೆ ವಿಚಾರ ಇಲ್ಲ. ನಾವೆಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರು. ಎಲ್ಲಾ ಊಹಾಪೋಹಗಳನ್ನು ಸೃಷ್ಟಿಸುವವರು ನೀವೆ ಎಂದು ಮಾಧ್ಯದ ವಿರುದ್ಧ ಕಿಡಿಕಾರಿದ್ದರು.