ಬೆಂಗಳೂರು, ಡಿ 12(Daijiworld News/MSP):"ಸಿದ್ದರಾಮಯ್ಯ ಮತ್ತು ನಾನು ಕುರುಬ ಸಮಾಜಕ್ಕೆ ಸೇರಿದವರು, ನಾವಿಬ್ಬರು ಅಣ್ಣ - ತಮ್ಮ ಇದ್ದಂತೆ" ಎಂದು ಬಿಜೆಪಿ ನಾಯಕ ಎಚ್.ವಿಶ್ವನಾಥ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರೊಂದಿಗೆ ದಾಯಾದಿ ಕಲಹವಿದ್ದರೆ ತೊಂದರೆ ಆಗುತ್ತಿರಲಿಲ್ಲ, ನಾವಿಬ್ಬರು ಅಣ್ಣ - ತಮ್ಮರಿದ್ದಂತೆ. "ಅಣ್ಣ"ನನ್ನು ಬೆಳೆಯಲು "ತಮ್ಮ" ಬಿಡುವುದಿಲ್ಲ’ ಹೀಗಾಗಿ ಇದು ಅಣ್ಣ -ತಮ್ಮನ ಕಿತ್ತಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಮುಂದುವರಿಸಿ ಮಾತನಾಡಿದ ಅವರು "ಉಪ ಚುನಾವಣೆಯಲ್ಲಿ ನಾನು ಸೋತರು ನಮ್ಮ ಉದ್ದೇಶಕ್ಕೆ ಗೆಲುವು ದೊರಕಿದೆ. ನಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ನಮಗೆ ಇನ್ನು ಮುಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್" ಎಂದು ಹೇಳಿದರು.
"ನನಗೆ ಇಂದು ಕೂಡಾ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಗ್ಗೆ ಗೌರವವಿದ್ದು ಆದರೆ ಆ ಪಕ್ಷಗಳ ನಾಯಕತ್ವ ಬಗ್ಗೆ ಬೇಸರವಿದೆ, ನನಗೆ ಕೆಲವರು ವರ್ಷಕ್ಕೊಮ್ಮೆಯಂತೆ ಮೂರು ಪಕ್ಷ ಬದಲಾಯಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ, ನಾನು 40 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಸಕ್ರಿಯನಾಗಿದ್ದೆ. ಆದರೆ ಯೋಗ್ಯತೆ ಇಲ್ಲದ ಮೈತ್ರಿ ಸರ್ಕಾರವನ್ನು ಕಿತ್ತೊಗೆಯಲು ಬಲವಾದ ಕಾರಣವಿತ್ತು. ಹೀಗಾಗಿ ಪಕ್ಷ ಬದಲಿಸಿದೆ. ನನ್ನನ್ನು ಪಕ್ಷಾಂತರಿ ಅನ್ನುತ್ತಾರಲ್ಲ , ಸಿದ್ದರಾಮಯ್ಯ ಆರು ಬಾರಿ ಮತ್ತು ರಮೇಶ್ ಕುಮಾರ್ ಒಂಬತ್ತು ಬಾರಿ ಪಕ್ಷಾಂತರ ಮಾಡಿದ್ದಾರೆ’ ಎಂದು ತಿಳಿದಿರಲಿ ಎಂದು ವ್ಯಂಗ್ಯವಾಡಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ ವಿಶ್ವನಾಥ್ " ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಹೊರಟವರು, ಅದನ್ನು ಮುಳುಗಿಸುವ ಮೊದಲೇ ನಾಯಕತ್ವ ಬಿಟ್ಟು ಹೊರನಡೆದಿದ್ದು ಕಾಂಗ್ರೆಸ್ ಒಳ್ಳೆಯದಾಯಿತು ಎಂದರು.