ಮುಂಬೈ, ಡಿ 12 (Daijiworld News/MB): 22 ವರ್ಷದ ಯುವಕನ ಮೇಲೆ ಕಾರಿನಲ್ಲಿ ನಾಲ್ಕು ಜನರು ಸಾಮೂಹಿಕ ಅತ್ಯಾಚಾರ ನಡೆಸಿ ಯುವಕನನ್ನು ಮರುದಿನ ಮುಂಜಾನೆ ರಸ್ತೆಯಲ್ಲಿ ಬಿಟ್ಟು ಹೋದ ಘಟನೆ ಮುಂಬೈನಲ್ಲಿ ಭಾನುವಾರ ನಡೆದಿದೆ.
ನಾಲ್ಕು ಆರೋಪಿಗಳ ಪೈಕಿ ಓರ್ವ ಅಪ್ರಾಪ್ತನಾಗಿದ್ದು ಆತನನ್ನು ರಿಮೈಂಡ್ ಹೋಮ್ಗೆ ಕಳಿಸಲಾಗಿದೆ. ಉಳಿದ ಆರೋಪಿಗಳಾದ ಮೆಹುಲ್ ಪರ್ಮಾರ್ (21), ಆಸಿಫ್ ಅಲಿ ಅನ್ಸಾರಿ (23) ಮತ್ತು ಪಿಯೂಷ್ ಚೌಹಾನ್ (22)ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಯುವಕನು ಮುಂಬೈನಲ್ಲಿರುವ ಒಂದು ಹೊಟೇಲ್ನ ಮುಂಭಾಗ ನಿಂತು ಫೋಟೋ ತೆಗೆದು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು ಆರೋಪಿಗಳು ಆ ಫೋಟೋವಿನ ಲೊಕೇಶನ್ ಟ್ರೇಸ್ ಮಾಡಿ ಆ ಹೊಟೇಲ್ ಮುಂಭಾಗ ಬಂದಿದ್ದಾರೆ.
ಆ ಬಳಿಕ ಯುವಕನಲ್ಲಿ ನಾವು ನಿಮ್ಮ ಅಭಿಮಾನಿಗಳು ಎಂದು ಹೇಳಿ ಬೈಕ್ನಲ್ಲಿ ಬರುವಂತೆ ಒತ್ತಾಯಿಸಿದ್ದು ಯುವಕ ಅವರ ಜೊತೆ ತೆರಳಿದ ನಂತರ ಮುಂಬೈ ವಿಮಾನನಿಲ್ದಾಣ ದಾರಿಯಲ್ಲಿ ಬೈಕ್ ನಿಲ್ಲಿಸಿ ಯುವಕನನ್ನು ಕಾರಿನೊಳಗೆ ಎಳೆದೊಯ್ದು ಸತತ ಮೂರು ಗಂಟೆಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.
ಅಷ್ಟು ಮಾತ್ರವಲ್ಲದೇ ಯುವಕನ ಎಟಿಎಂ ಕಾರ್ಡ್ ಬಳಸಿ ಕಾರಿಗೆ ಪೆಟ್ರೋಲ್ ಹಾಕಿ ನಂತರ ಹೆಚ್ಚಿನ ಹಣವನ್ನು ಆತನ ಎಟಿಎಂನಿಂದ ತೆಗೆದಿದ್ದಾರೆ. ನಂತರ ಸೋಮವಾರ ಬೆಳಿಗ್ಗೆ ಯುವಕನನ್ನು ದಾರಿಯಲ್ಲಿ ಎಸೆದು ಹೋಗಿದ್ದಾರೆ.
ಆತಂಕಕೊಳಗಾಗಿದ್ದ ಯುವಕನು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ನಂತರ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ.
ಈ ಕುರಿತು ಮಾತಾನಾಡಿದ ಹಿರಿಯ ಪೊಲೀಸ್ ಅಧಿಕಾರಿ ಮಾಧುರಿ ಪೋಕ್ಲೆ "ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ಥ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವರದಿಗಾಗಿ ದೊರೆತ ನಂತರ ಕ್ರಮಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.