ವಿಜಯಪುರ, ಡಿ 12 (Daijiworld News/MB) : " ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮರ್ಥರಾಗಿದ್ದಾರೆ. ಅವರ ನಾಯಕತ್ವಲ್ಲೇ ಎಲ್ಲರೂ ಕಾರ್ಯ ನಿರ್ವಹಿಸಲಿ. ಮುಖ್ಯಮಂತ್ರಿ ಇದ್ದರೆ ಸಾಕು, ಉಪ ಮುಖ್ಯಮಂತ್ರಿಗಳು ಬೇಡ. ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಕೈಬಿಡುವುದು ಒಳ್ಳೆಯದು" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಮುಖ್ಯಮಂತ್ರಿಯನ್ನು ಹೊತರು ಪಡಿಸಿ ಉಳಿದವವರು ಮಂತ್ರಿಗಳಾಗಿ ಇರಲಿ. ಉಪ ಮುಖ್ಯಮಂತ್ರಿ ಯಾಕೆ ಬೇಕು? ಉಪ ಮುಖ್ಯಮಂತ್ರಿ ಸ್ಥಾನಗಳೇ ಬೇಕಾಗಿಲ್ಲ. ಒಂದು ಗೂಟದ ಕಾರು ಹಾಗೂ ಪೈಲಟ್ಗಾಗಿ ಮಂತ್ರಿಗಿರಿ ಬೇಡ. ಹಾಗೆಯೇ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಂವಿಧಾನಾತ್ಮಕವಾಗಿ ಯಾವುದೇ ಗೌರವವಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಾಗೆಯೇ "ವಿಜಯಪುರ ಜಿಲ್ಲೆಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನ ನೀಡಿದರೆ ಆ ಸ್ಥಾನವನ್ನು ವಿಜಯಪುರದವರು ಸಮರ್ಥವಾಗಿ ನಿಭಾಯಿಸಬಲ್ಲೆವು. ಸಚಿವ ಸ್ಥಾನ ಕೊಟ್ಟರೆ ನೋಡೋಣ. ಅಲ್ಲದೇ ಜಿಲ್ಲೆಗೆ ಇಂದು ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾರ್ಯಗಳಿಗಾಗಿ ಬರುತ್ತಿದೆ. ನನಗೆ ಜಿಲ್ಲೆಯ ಅಭಿವೃದ್ಧಿಯಾದರೆ ಸಾಕು" ಎಂದು ಹೇಳಿದ್ದಾರೆ.
ಜಾರ್ಖಂಡ್ ಚುನಾವಣೆಯ ಹಿನ್ನಲೆಯಲ್ಲಿ ರಾಷ್ಟ್ರೀಯ ನಾಯಕರು ಚುನಾವಣಾ ಕಾರ್ಯಗಳಲ್ಲಿ ತೊಡಗಿದ್ದಾರೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆ ತಡವಾಗುತ್ತದೆ. 2 ವಾರಗಳು ಕಾಯೋಣ ಎಂದರು.
ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮಾತಾನಾಡಿ, "ಒಂದು ಐತಿಹಾಸಿಕ ಮಸೂದೆ ಪಾಸ್ ಮಾಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸೇರಿದಂತೆ ವಿವಿಧೆಡೆ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಅವರಿಗೆ ಭಾರತೀಯ ಪೌರತ್ವ ನೀಡಲು ನಿರ್ಧಾರ ಮಾಡಿರುವುದು ಐತಿಹಾಸಿಕ ತಿರ್ಮಾನವಾಗಿದೆ. ನಮ್ಮ ಪ್ರಧಾನಿಗಳು ಹಾಗೂ ನಾಯಕರು ಹಿಂದೂಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ" ಎಂದು ಹೇಳಿ ಅವರಿಗೆ ಧನ್ಯವಾದ ಸಲ್ಲಿಸಿದರು.
"ಕಾಂಗ್ರೆಸ್ ನಾಯಕರು ಪಾಕಿಸ್ಥಾನದವರಿಗೆ ಹುಟ್ಟಿದಂತೆ ಮಾತನಾಡುತ್ತಿದ್ದಾರೆ. ಈ ಮಸೂದೆಯನ್ನು ವಿರೋಧ ಮಾಡುವ ಅವರು ಪಾಕಿಸ್ಥಾನದ ಏಜೆಂಟರು. ಅವರಿಗೆ ನ್ಯಾಯ ನೀತಿ ಅನ್ನುವುದು ಇದ್ದರೆ ಈ ರೀತಿ ಈ ಮಸೂದೆಯನ್ನು ವಿರೋಧ ಮಾಡಬಾರದು. ಇದು ದೇಶದ ದುರ್ದೈವ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.