ನವದೆಹಲಿ, ಡಿ 12(Daijiworld News/MSP): ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಸೈಬರಾಬಾದ್ ಪೊಲೀಸರಿಗೆ ಇದೀಗ ಕಾನೂನು ಸಂಕಷ್ಟ ಪ್ರಾರಂಭವಾಗಿದೆ.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಸುಪ್ರೀಂಕೋರ್ಟ್ ತ್ರಿಸದಸ್ಯರನ್ನೊಳಗೊಂಡ ಆಯೋಗವನ್ನು ನೇಮಕ ಮಾಡಿದ್ದು ಆರು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಪೊಲೀಸರು ನಡೆಸಿದ ಎನ್ ಕೌಂಟರ್ ಪ್ರಶ್ನಿಸಿ ಜಿ.ಎಸ್. ಮಣಿ ಎಂಬ ವಕೀಲ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯರನ್ನೊಳಗೊಂಡ ಆಯೋಗ ನೇಮಕ ಮಾಡಿದೆ.
ತ್ರಿಸದಸ್ಯರನ್ನೊಳಗೊಂಡ ಆಯೋಗದಲ್ಲಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ವಿಎಸ್ ಸರ್ಪುಕಾರ್ ಆಯೋಗದ ಮುಖ್ಯಸ್ಥರಾಗಿದ್ದು, ಬಾಂಬೆ ಹೈಕೋರ್ಟ್ ನಿವೃತ್ತ ಜಡ್ಜ್ ರೇಖಾ ಬಲ್ಡೋಟಾ, ಸಿಬಿಐ ಮಾಜಿ ಮುಖ್ಯಸ್ಥ ಬಿ.ಕಾರ್ತಿಕೇಯನ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ತೆಲಂಗಾಣ ಸರ್ಕಾರದ ಪರಅಭಿಪ್ರಾಯ ವ್ಯಕ್ತಪಡಿಸಲು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರಿಗೆ ಸಿಜೆಐ ಎಸ್.ಎ ಬೋಬ್ಡೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ತ್ರಿಸದಸ್ಯರನ್ನೊಳಗೊಂಡ ಆಯೋಗದ ನೇಮಕಕ್ಕೆ ತೆಲಂಗಾಣ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.