ನವದೆಹಲಿ,ಡಿ 13(Daijiworld News/MSP): ಹೊಸದಾಗಿ ನೀಡಲಾಗುತ್ತಿರುವ ಭಾರತದ ಪಾಸ್ಪೋರ್ಟ್ನಲ್ಲಿ "ಕಮಲ" ಚಿಹ್ನೆಯನ್ನು ಮುದ್ರಿಸುವ ಮೂಲಕ ಕೇಸರೀಕರಣ ಮಾಡುವ ಪ್ರಯತ್ನ ನಡೆದಿದೆ ಎನ್ನುವ ವಿಪಕ್ಷದ ಆರೋಪಕ್ಕೆ, ಸ್ಪಷ್ಟನೆ ವಿದೇಶಾಂಗ ಇಲಾಖೆ "ಸುಧಾರಿತ ಭದ್ರತಾ ವೈಶಿಷ್ಟ್ಯದ ಭಾಗವಾಗಿದೆ" ಎಂದು ಹೇಳಿದೆ.
ಕೇರಳದ ಕೋಝಿಕೋಡ್ ನಲ್ಲಿ ವಿತರಿಸಿರುವ ಹೊಸ ಪಾಸ್ಪೋರ್ಟ್ ನಲ್ಲಿ ಕಮಲದ ಚಿಹ್ನೆ ಇರುವುದನ್ನು ಪತ್ರಿಕೆಯಲ್ಲಿ ವರದಿಯಾಗಿದ್ದು, "ಸರ್ಕಾರ ಕೇಸರೀಕರಣದಲ್ಲಿ ತೊಡಗಿದೆ " ಎಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸಂಸದ ರಾಘವನ್ ಪ್ರಸ್ತಾಪಿಸಿದ್ದರು. ಈ ವಿಚಾರವಾಗಿ ಗದ್ದಲ ಏರ್ಪಟ್ಟು ವಿಪಕ್ಷ ನಾಯಕ ಚೌದರಿ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಜೈಶಂಕರ್ ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, "ಭದ್ರತೆ ಹಾಗೂ ನಕಲಿ ಪಾಸ್ಪೋರ್ಟ್ ಹಾವಳಿ ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ. ರಾಷ್ಟ್ರದ ವಿವಿಧ ಚಿಹ್ನೆಗಳನ್ನು ಪಾಸ್ಪೋರ್ಟ್ನಲ್ಲಿ ಬಳಸಲಾಗುವುದು. ನಮ್ಮ ರಾಷ್ಟ್ರೀಯ ಹೂವು ಕಮಲ ದೇಶದ ಸಂಕೇತವಾಗಿ ಇದನ್ನು ಮುದ್ರಿಸಲಾಗಿತ್ತು. ಸುಧಾರಿತ ಭದ್ರತಾ ವೈಶಿಷ್ಟವನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆಯ ಗೈಡ್ ಲೈನ್ಸ್ ಪ್ರಕಾರವೇ ಪರಿಚಯಿಸಲಾಗಿದೆ. ದೇಶದ ರಾಷ್ಟ್ರ ಪಕ್ಷಿ, ಪ್ರಾಣಿಗಳ ಚಿಹ್ನೆಯನ್ನು ಕೂಡಾ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.