ನವದೆಹಲಿ, ಡಿ 13(Daijiworld News/MSP): ಭಾರತ ವಿಶ್ವದ ರೇಪ್ ನ ರಾಜಧಾನಿ, ಮೇಕ್ ಇನ್ ಇಂಡಿಯಾ ಬದಲು 'ರೇಪ್ ಇನ್ ಇಂಡಿಯಾ' ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಖಂಡಿಸಿ ಬಿಜೆಪಿ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ್ದು ಲೋಕಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.
ಇತ್ತೀಚೆಗೆ ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಯುವತಿ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆ ಮಾಡಿದ್ದರ ಬಗ್ಗೆ ಉಲ್ಲೇಖಿಸಿದ್ದ ಅವರು ದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ನರೇಂದ್ರ ಮೋದಿ ಅವರು 'ಮೇಕ್ ಇನ್ ಇಂಡಿಯಾ' ಎಂದು ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ 'ರೇಪ್ ಇನ್ ಇಂಡಿಯಾ' ಆಗಿದೆ ಎಂದು ಟೀಕಿಸಿದ್ದರು.
ರಾಹುಲ್ ಗಾಂಧಿಯ ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕರು ರಾಹುಲ್ ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ತಾವು ಕ್ಷಮೆ ಯಾಚಿಸುವುದಿಲ್ಲ ಮೋದಿಯೇ ಕ್ಷಮೆ ಕೇಳಬೇಕು ಎಂದಿದ್ದಾರೆ. ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದ್ದು, ಇನ್ನೊಂದೆಡೆ ಪೌರತ್ವ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳು ಹೊತ್ತಿ ಉರಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮೋದಿ ಮಾಡಿರುವ ಭಾಷಣದ ತುಣುಕನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಮೋದಿ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿ " ದೆಹಲಿಯನ್ನು ನೀವು ರೇಪ್ ನ ರಾಜಧಾನಿ ಮಾಡಿದ್ದೀರಿ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ವಿಶ್ವದಲ್ಲಿ ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ. ಅಮ್ಮ ಅಕ್ಕ ತಂಗಿಯರ ಸುರಕ್ಷತೆಗೆ ನೀವು ಯೋಜನೆಗಳು ಜಾರಿಗೆ ತಂದಿಲ್ಲ, ತರುವ ಧಮ್ ಕೂಡಾ ಇಲ್ಲ ಎಂದಿದ್ದರು.