ನವದೆಹಲಿ, ಡಿ 14 (Daijiworld News/MB) : ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಮಧ್ಯಪ್ರದೇಶ ಹಾಗೂ ಛತ್ತೀಸ್ಘಡದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದ್ದು ಅಲ್ಲಿನ ಸರಕಾರ ಈ ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿ ಮಾಡಲು ನಾವು ಬಿಡುವುದಿಲ್ಲ ಎಂದು ಘೋಷಣೆ ಮಾಡಿದೆ.
ಈಗಾಗಲೇ ಕೇರಳ, ಪಂಜಾಬ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಸರಕಾರ ಈ ಮಸೂದೆಯನ್ನು ವಿರೋಧ ಮಾಡಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೇಂದ್ರ ಸರಕಾರದ ಈ ತಿದ್ದುಪಡಿ ಮಸೂದೆಯನ್ನು ನಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ನಾವು ಬಿಡುವುದಿಲ್ಲ ಎಂದು ಘೋಷಣೆ ಮಾಡಿದ್ದರು.
ಈ ಕುರಿತು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ "ಈ ಪೌರತ್ವ ತಿದ್ದುಪಡಿ ಮಸೂದೆ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತದೆಯಾದರೂ ಅದನ್ನು ಜಾರಿ ಮಾಡಲು ಕೇಂದ್ರ ಸರಕಾರ ರಾಜ್ಯಗಳಿಗೆ ಒತ್ತಾಯ ಮಾಡುವಂತಿಲ್ಲ" ಎಂದು ಹೇಳಿದ್ದಾರೆ.
ಹಾಗೆಯೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ "ಈ ಮಸೂದೆ ಭಾರತ ದೇಶದ ಜಾತ್ಯಾತೀತತೆಗೆ ಧಕ್ಕೆ ಉಂಟುಮಾಡುತ್ತದೆ. ಆ ಕಾರಣದಿಂದಾಗಿ ಇದನ್ನು ರಾಜ್ಯದಲ್ಲಿ ಅನುಮೋದನೆ ಮಾಡುವುದಿಲ್ಲ" ಎಂದು ತಿಳಿಸಿದ್ದರು.