ವಾರಾಣಸಿ, ಡಿ 14 (Daijiworld News/MSP): ದೇಶದಲ್ಲೆಡೆ ಈರುಳ್ಳಿ ದರದ ಚರ್ಚೆಯೇ ನಡೆಯುತ್ತಿರುವಾಗ ಇಲ್ಲೊಂದು "ಈರುಳ್ಳಿ–ಬೆಳ್ಳುಳ್ಳಿ ಪ್ರಮುಖ್ಯತೆ ಪಡೆದ ಮದುವೆಯೊಂದು ಗಮನ ಸೆಳೆದಿದೆ.
ವಾರಣಾಸಿಯ ವಧು-ವರ ಜೋಡಿಯೊಂದು ವಿವಾಹದ ಸಮಯದಲ್ಲಿ, ಭಾರತೀಯ ಸಂಪ್ರದಾಯದಂತೆ ಹೂವಿನ ಹಾರದ ಬದಲು ದುಬಾರಿಯಾದ ನೀರುಳ್ಳಿ ಬೆಳ್ಳುಳ್ಳಿ ಪೋಣಿಸಿ ಹಾರವಾಗಿ ಮಾಡಿಕೊಂಡು ವರಮಾಲೆ ಬದಲಾಯಿಸಿದ್ದಾರೆ. "ಈರುಳ್ಳಿ ಬೆಲೆ ಏರಿಕೆಯ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ" ಇದು ಎಂದು ಆ ಬಳಿಕ ವಧುವರರು ತಮ್ಮ ಹೇಳಿಕೆ ನೀಡಿದ್ದಾರೆ.
ಈ ವಿವಾಹ ಸಮಾರಂಭದಲ್ಲಿ ನವದಂಪತಿಗಳಿಗೆ ಶುಭಕೋರಲು ಬಂದಿದ್ದ ಅತಿಥಿಗಳೂ ಸಹ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಬಿದ ಬುಟ್ಟಿಗಳನ್ನು ಉಡುಗೊರೆಯಾಗಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಕಮಲ್ ಪಟೇಲ್ " 'ದೇಶದಲ್ಲಿ ಇತ್ತೀಚೆಗೆ ಈರುಳ್ಳಿ ಬೆಲೆ ಗಗನಕ್ಕೇರಿರುವ ಕಾರಣ ಜನಸಾಮಾನ್ಯರಿಗೆ ಈರುಳ್ಳಿಯೇ "ಚಿನ್ನ" ದಂತಾಗಿದೆ. ಒಂದು ಕಿಲೋ ಈರುಳ್ಳಿಗೆ 120 ರೂ ಕನಿಷ್ಟ ಬೆಲೆಯಿದೆ, ಹೀಗಾಗಿ ಮದುವೆಯಲ್ಲಿ ವಧು–ವರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾರಗಳನ್ನು ಧರಿಸಿದ್ದಾರೆ ಎಂದು ಹೇಳಿದ್ದಾರೆ.
' ಬೆಲೆ ಏರಿಕೆಯ ವಿರುದ್ದ ಸಮಾಜವಾದಿ ಪಕ್ಷ ಹಲವಾರು ಬಾರಿ ಪ್ರತಿಭಟನೆ ನಡೆಸಿದೆ, ಗಗನಕ್ಕೇರಿದ ಈರುಳ್ಳಿ ಬೆಲೆಯನ್ನು ವಿರೋಧಿಸಿ ವಿಭಿನ್ನ ರೀತಿಯಲ್ಲಿ ಜೋಡಿ ಪ್ರತಿಭಟಿಸಿ ದಾಖಲೆ ಬರೆದಿದೆ. ನವ ವಿವಾಹಿತರಿಗೆ ಇದೊಂದು ಮರೆಯಲಾಗದ ಐತಿಹಾಸಿಕ ಘಟನೆಯಾಗಿದೆ'