ನವದೆಹಲಿ, ಡಿ 14 (Daijiworld News/MB) : ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ, ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆದೇಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನಂತರ ಅಪರಾಧಿಯೊಬ್ಬ ಸಲ್ಲಿಸಿರುವ ಪರಿಶೀಲನಾ ಅರ್ಜಿ ಸುಪ್ರೀಂಕೋರ್ಟ್ ಮುಂದೆ ಬಾಕಿ ಇರುವ ಹಿನ್ನಲೆಯಲ್ಲಿ ಅರ್ಜಿ ಕುರಿತು ನಿರ್ಧಾರವನ್ನು ಡಿಸೆಂಬರ್ 18ಕ್ಕೆ ಮುಂದೂಡಿದ್ದಾರೆ.
ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ, ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಡಿಸೆಂಬರ್ 17ರಂದು ನಡೆಯಲಿದ್ದು ಅಪೆಕ್ಸ್ ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆಯೋ ಕಾದು ನೋಡಬೇಕು. ಹಾಗಾಗಿ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡುವುದಾಗಿ ತೀರ್ಪು ನೀಡಿದ್ದಾರೆ.
23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ 2012ರ ಡಿಸೆಂಬರ್ 16-17 ರ ಮಧ್ಯರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸೊಂದರಲ್ಲಿ ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಆಕೆಯನ್ನು ಚಲಿಸುವ ಬಸ್ಸಿನಿಂದ ಹೊರಗೆ ತಳ್ಳಿದ್ದರು. ಸಿಂಗಾಪುರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತೀವ್ರ ಗಾಯವಾದ ವಿದ್ಯಾರ್ಥಿನಿ ಡಿಸೆಂಬರ್ 29ರಂದು ಆಸ್ಪತ್ರೆಯ್ಲಲೇ ಮೃತಪಟ್ಟಿದ್ದಳು.
ಈ ಪ್ರಕರಣದ ಮೂವರು ಆರೋಪಿಗಳಾದ ಮುಖೇಶ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಅವರು ಕಳೆದ ವರ್ಷದ ಜುಲೈನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿತ್ತು.
ಆರೋಪಿಗಳ ಪೈಕಿ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹಾಗೆಯೇ ಬಾಲಪರಾಧಿಯನ್ನು ಮೂರು ವರ್ಷಗಳ ಶಿಕ್ಷೆಯ ನಂತರ ಸುಧಾರಣಾ ಗೃಹದಿಂದ ಬಿಡುಗೆಡೆ ಮಾಡಲಾಗಿದೆ. ಗಲ್ಲು ಶಿಕ್ಷೆ ಜಾರಿಗೆ ನ್ಯಾಯಾಲಯ ಅನುಮತಿ ನೀಡಲು ಯಾವುದೇ ಅಡೆತಡೆಗಳು ಇಲ್ಲದ ಕಾರಣ, ಮರಣ ದಂಡನೆ ವಿಧಿಸಲು ಅನುಮತಿ ನೀಡಬೇಕು ಎಂದು ಪ್ರಾಸಿಕ್ಯೂಷನ್ ಮನವಿ ಮಾಡಿತು.
ಈ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಅಕ್ಷಯ್ ಕುಮಾರ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಡಿಸೆಂಬರ್ 17ರಂದು ನಡೆಯಲಿದೆ.