ಮಹಾರಾಷ್ಟ್ರ, ಡಿ 14 (Daijiworld News/MB) : ಆತ್ಮಹತ್ಯೆ ಮಾಡಲೆಂದು ಯುವತಿಯು ಸರಕಾರಿ ಕಟ್ಟಡದ ಐದನೇ ಮಹಡಿಯಿಂದ ಜಿಗಿದಿದ್ದು ಬಲೆಗೆ ಸಿಲುಕಿ ಒದ್ದಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
24 ವರ್ಷದ ಯುವತಿಯು ತನಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸಹಾಯಕ್ಕೆಂದು ಕೋರಿ ಸೆಕ್ರೆಟ್ರಿಯೇಟ್ ಕಚೇರಿಗೆ ಹೋಗಿದ್ದು ಅಲ್ಲಿ ಸಚಿವರ ಭೇಟಿಗೆ ಅವಕಾಶ ದೊರಕದ ಹಿನ್ನಲೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ನೆಟ್ ಅಡ್ಡವಾಗಿದ್ದ ಕಾರಣ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ಕುರಿತು ಮಾಹಿತಿ ನೀಡಿರುವ ಯುವತಿಯ ಸಹೋದರ "ಆಕೆ ಹಾಗೂ ಆಕೆಯ ಪತಿ ಉಲ್ಹಸ ನಗರದಲ್ಲಿ ಜ್ಯೂಸ್ ಅಂಗಡಿಯನ್ನು ನಡೆಸುತ್ತಿದ್ದು ಈ ಜ್ಯೂಸ್ ಅಂಗಡಿ ಪಡೆಯುವ ಉದ್ದೇಶದಿಂದ ಪರಿಚಯಸ್ಥರೇ ಪೊಲೀಸರಿಗೆ ದೂರು ನೀಡಿ ದೌರ್ಜನ್ಯವೆಸಗಿದ್ದರು. ಈ ಸುಳ್ಳು ದೂರಿನ ಮೇರೆಗೆ ಪೊಲೀಸರು ಈ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ನ್ಯಾಯ ಕೋರಿ ಆಕೆ ಸೆಕ್ರೆಟ್ರಿಯೇಟ್ಗೆ ಬಂದಿದ್ದು ಐಡಿ ಕಾರ್ಡ್ ಇರದ ಕಾರಣ ಅಧಿಕಾರಿಗಳನ್ನು ಆಕೆಗೆ ಭೇಟಿ ಮಾಡಲು ಆಗಲಿಲ್ಲ. ಇದರಿಂದಾಗಿ ಆಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ" ಎಂದು ತಿಳಿಸಿದ್ದಾರೆ.
ಬಲೆಯಲ್ಲಿ ಸಿಲುಕಿದ್ದ ಯುವತಿಯನ್ನು ಸಿಬ್ಬಂದಿಗಳು ರಕ್ಷಿಸಿ ಆಸ್ಪತ್ರಗೆ ದಾಖಲಿಸಿದ್ದು ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.