ಬೆಂಗಳೂರು, ಡಿ 14 (Daijiworld News/MSP): ದುಂದುಗಾರಿಕೆ, ಐಷಾರಾಮಿ ಜೀವನ ನಡೆಸುತ್ತಿದ್ದ ಪತ್ನಿಯ ಕಿರುಕುಳ ತಾಳಲಾರದೆ 39 ವರ್ಷದ ಟೆಕ್ಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಹಾಲನಾಯಕನಹಳ್ಳಿಯಲ್ಲಿ ನಡೆದಿದೆ.
ಮೃತನನ್ನು ಶ್ರೀನಾದ್ ಎಂದು ಗುರುತಿಸಲಾಗಿದೆ, ಆಂದ್ರ ಮೂಲದ ಶ್ರೀನಾದ್ ಹಾಗೂ ಆತನ ಪತ್ನಿ ರೇಖಾ ಇಬ್ಬರು ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಇವರಿಬ್ಬರೂ 2009ರಲ್ಲಿ ವಿವಾಹವಾಗಿದ್ದರು.
ಬೆಂಗಳೂರಿನಲ್ಲಿ ಇಬ್ಬರೂ ಉದ್ಯೋಗದಲ್ಲಿದ್ದ ಕಾರಣ ಶ್ರೀನಾದ್ ಬ್ಯಾಂಕ್ ಲೋನ್ ಪಡೆದು ಫ್ಲ್ಯಾಟ್ ಖರೀದಿಸಿದ್ದರು. ಲೋನ್ ಕಂತು ಶ್ರೀನಾದ್ ಪ್ರತಿ ತಿಂಗಳು ಪಾವತಿಸುತ್ತಿದ್ದು, ಆದರೆ ಪತ್ನಿ ರೇಖಾ ಪತಿಗೆ ಸಹಕಾರ ನೀಡದೆ ಐಷಾರಾಮಿ ಜೀವನ ನಡೆಸಲು ದುಂದು ವೆಚ್ಚ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಶ್ರೀನಾದ್ ಆಕ್ಷೇಪ ವ್ಯಕ್ತಪಡಿಸಿದರೂ ತಮ್ಮ ದುಂದುವೆಚ್ಚ ಮುಂದುವರಿಸಿ ಪತಿಗೆ ಕಿರುಕುಳ ಕೊಡಲಾರಂಭಿಸಿದ್ದಾರೆ.
ಶ್ರೀನಾದ್ ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ಪಾಲು ಕೇಳುವಂತೆ ಪತಿಯನ್ನು ಒತ್ತಾಯಿಸುತ್ತಿದ್ದು, ಇಲ್ಲವಾದರೆ ವಿಚ್ಚೇದನ ನೀಡುತ್ತೇನೆ ಎಂದು ಪೀಡಿಸುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಟೆಕ್ಕಿ ತಂದೆ ನಾಗೇಶ್ವರ ರಾವ್ ದೂರಿನಲ್ಲಿ ತಿಳಿಸಿದ್ದು, ರೇಖಾ ಮತ್ತು ಆಕೆಯ ಹೆತ್ತವರ ವಿರುದ್ಧ ದೂರು ದಾಖಲಿಸಲಾಗಿದೆ.