ಬೆಂಗಳೂರು, ಡಿ 14 (Daijiworld News/MSP): ಪತ್ನಿ ಕೆಲಸಕ್ಕೆಂದು ಮನೆಯಿಂದ ಹೊರಹೋಗುತ್ತಿದ್ದಂತೆ ಮೌಲ್ವಿಯೊಬ್ಬ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ವಿಕೃತ ಚಿತ್ರಹಿಂಸೆ ನೀಡುತ್ತಿದ್ದ ಭೀಕರ ಘಟನೆ ಬೆಳಕಿಗೆ ಬಂದಿದೆ.
ಕೋರಮಂಗಲದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಮೌಲ್ವಿ ಫರ್ವೇಜ್ ಎಂದು ಗುರುತಿಸಲಾಗಿದೆ. ಮನೆಕೆಲಸ ಹಾಗೂ ಮದರಸ ಸ್ವಚ್ಚತೆಗೆ ಸಹಾಯದ ಕೆಲಸದ ಆಮಿಷವೊಡ್ಡಿ ಬಿಹಾರದ 26ವರ್ಷದ ಯುವತಿಯನ್ನು ಮನೆಗೆ ಕರೆತಂದಿದ್ದಾನೆ. ಮೌಲ್ವಿ ಫರ್ವೇಜ್ ಪತ್ನಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದು, ತನ್ನ ಪತ್ನಿ ಕೆಲಸಕ್ಕೆ ಹೊರಡುತ್ತಿದ್ದಂತೆ ಈತ ಕೆಲಸದಾಕೆಯ ಮೇಲೆ ದೌರ್ಜನ್ಯವೆಸಗಲು ಪ್ರಾರಂಭಿಸುತ್ತಿದ್ದ.
ಕೋರಮಂಗಲದ 8ನೇ ಕ್ರಾಸ್ನಲ್ಲಿ ಮದರಸ ಹಾಗೂ ಟ್ಯುಟೋರಿಯಲ್ ನಡೆಸುತ್ತಿದ್ದ ಮೌಲ್ವಿ, ಯುವತಿಯನ್ನು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸುತ್ತಿದ್ದಲ್ಲದೆ ಅಲ್ಲದೆ ಐರನ್ ಬಾಕ್ಸ್ನಿಂದ ಯುವತಿಯ ದೇಹ ಸುಟ್ಟು ಚಿತ್ರಹಿಂಸೆ ವಿಕೃತಿ ಮೆರೆದಿದ್ದಾನೆ. ಸದ್ಯ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ
ಸಂತ್ರಸ್ತ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 ಅಡಿ (ಅಕ್ರಮ ಬಂಧನ), 376 ಅಡಿ (ಅತ್ಯಾಚಾರ), 307 ಅಡಿ (ಕೊಲೆ ಯತ್ನ), 506,507 ಅಡಿ ಬೈಗುಳ, ಜೀವ ಬೆದರಿಕೆ ಆರೋಪದಡಿ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.