ಹೈದರಾಬಾದ್, ಡಿ 14 (Daijiworld News/MB) : ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಅಘಾತಕಾರಿ ಮಾಹಿತಿ ಹೊರಬೀಳುತ್ತಿದೆ. ಇದೀಗ ಪಶುವೈದ್ಯೆಯ ದೇಹದ ವಿಧಿ ವಿಜ್ಞಾನ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಆಕೆಯನ್ನು ಜೀವಂತ ಸುಟ್ಟುಹಾಕುವ ಮೊದಲು "ಬಲವಂತವಾಗಿ ಆಕೆಗೆ ಕಂಠಪೂರ್ತಿ ಮದ್ಯ ಕುಡಿಸಿದ್ದರು" ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ನವೆಂಬರ್ 27ರಂದು ಪಶುವೈದ್ಯೆ ದಿಶಾ ತೋಂಡುಪಲ್ಲಿ ಟೋಲ್ ಪ್ಲಾಜಾ ಬಳಿ ತನ್ನ ಸ್ಕೂಟರ್ ಅನ್ನು ನಿಲ್ಲಿಸಿ ನಂತರ ಚರ್ಮರೋಗ ವೈದ್ಯರನ್ನು ಭೇಟಿ ಮಾಡುವ ಸಲುವಾಗಿ ಗಚಿಬೌಲಿಗೆ ಕ್ಯಾಬ್ ಮೂಲಕ ಹೋಗಿದ್ದಳು. ನಂತರ ಆಕೆ ರಾತ್ರಿ 9.30 ಗಂಟೆಗೆ ನೇರವಾಗಿ ಟೋಲ್ ಪ್ಲಾಜಾಗೆ ತಲುಪಿದ್ದಳು. ದಿಶಾ ಈ ನಡುವೆ ಎಲ್ಲಿಯೂ ನಿಂತಿರಲಿಲ್ಲ. ಹೀಗಾಗಿ ಆರೋಪಿಗಳೇ ಒತ್ತಾಯಪೂರ್ವಕವಾಗಿ ಪಶುವೈದ್ಯೆಗೆ ಮದ್ಯ ಕುಡಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ವೈದ್ಯೆಯ ಯಕೃತ್ತಿನಲ್ಲಿ ಅಲ್ಕೊಹಾಲ್ ಅಂಶ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿಶಾಳಿಗೆ ಮದ್ಯಪಾನ ಮಾಡಿಸಿ ಅತ್ಯಾಚಾರ ನಡೆಸಿರಬಹುದು ಎಂದು ಈ ಮೊದಲೇ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಈ ವಿಧಿ ವಿಜ್ಞಾನ ಪರೀಕ್ಷೆಯಿಂದ ದಿಶಾಳ ಮೇಲೆ ಈ ನಾಲ್ವರು ಆರೋಪಿಗಳು ಅತ್ಯಾಚಾರ ನಡೆಸಿರುವುದು ದೃಢ ಪಟ್ಟಿದೆ ಎಂದು ತಿಳಿದು ಬಂದಿದೆ. ಮೊಹಮ್ಮದ್ ಆರೀಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚೆನ್ನಕೇಶಾವುಲು ಎಂಬ ಈ ನಾಲ್ವರು ಆರೋಪಿಗಳು ಟೋಲ್ ಪ್ಲಾಜಾದಲ್ಲಿ ತಮ್ಮ ಲಾರಿಯನ್ನು ನಿಲ್ಲಿಸಿ ಮದ್ಯಪಾನ ಮಾಡಿದ್ದು ಅತ್ಯಾಚಾರ ಮಾಡುವ ಉದ್ದೇಶದಿಂದಲ್ಲೇ ಆಕೆಯ ಸ್ಕೂಟರನ್ನು ಪಂಚರ್ ಮಾಡಿದ್ದರು. ಆ ಬಳಿಕ ಆರೋಪಿಗಳು ಸಂತ್ರಸ್ಥೆಯನ್ನು ಟೋಲ್ ಪ್ಲಾಜಾ ಬಳಿಯ ಪೊದೆಗೆ ಎಳೆದೊಯ್ದು ಆಕೆಗೆ ಅತ್ಯಾಚಾರ ಎಸಗಿದ್ದು ಬಲವಂತವಾಗಿ ಆಕೆಯ ಗಂಟಲಿಗೆ ಮದ್ಯವನ್ನು ಸುರಿದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಎಲ್ಲಾ ಆರೋಪಿಗಳು ಮಹಜರು ನಡೆಸುವ ವೇಳೆ ಪೊಲೀಸರಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಹಿನ್ನಲೆಯಲ್ಲಿ ಅವರನ್ನು ಎನ್ಕೌಂಟರ್ ಮಾಡಲಾಗಿದೆ.