ನವದೆಹಲಿ,ಡಿ 14 (Daijiworld News/MSP): ಪೌರತ್ವ ತಿದ್ದುಪಡಿ ಮಸೂದೆ , ರೈತರು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪಕ್ಷವೂ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸುತ್ತಿದ್ದು , ಪ್ರತಿಭಟನೆಯಲ್ಲಿ ಭಾರತ್ ಬಚಾವೋ ಕಹಳೆ ಮೊಳಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಭಾರತ್ ಬಚಾವೋ ಸಮಾವೇಶದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 'ಮೋದಿ ಹೈ ತೋಹ್ ಮಮ್ಕಿನ್ ಹೈ (ಮೋದಿ ಇದ್ದರೆ ಸಾಧ್ಯವಿದೆ) ಎಂಬ ಸ್ಲೋಗನ್ ಬಸ್ ನಿಲ್ದಾಣ, ಪತ್ರಿಕೆ ಹೀಗೆ ಎಲ್ಲೆಂದರಲ್ಲಿರುವ ಇರುವ ಜಾಹೀರಾತುಗಳಲ್ಲಿ ಕಾಣಸಿಗುತ್ತದೆ. ಆದರೆ "ವಾಸ್ತವವೆಂದರೆ 'ಬಿಜೆಪಿ ಇದ್ದರೆ ಕೆ.ಜಿ ಈರುಳ್ಳಿಗೆ 100 ರೂಪಾಯಿ ಸಾಧ್ಯವಿದೆ , 'ಬಿಜೆಪಿ ಇದ್ದರೆ ದೇಶದಲ್ಲಿ ಅತಿ ನಿರುದ್ಯೋಗ ಸಾಧ್ಯವಿದೆ," ಅವರು ವಾಗ್ದಾಳಿ ನಡೆಸಿದರು.
"ಮೋದಿ ಇದ್ದರೆ, ನಿರುದ್ಯೋಗ' - ಬೆಲೆ ಏರಿಕೆ ಎಂದು ಹೊಸ ಘೋಷಣೆ ಕೂಗಿದ ಅವರು ಕಳೆದ ಆರು ವರ್ಷದಲ್ಲಿ ಕೆಲಸಕ್ಕೆ ಬಾರದ ಕಾಯ್ದೆ ಕಾನೂನುಗಳನ್ನು ಮಾಡಿಕೊಂಡು, ದೇಶದ ಜನರ ಗಮನವನ್ನೇ ಬೇರೆಡೆ ಸೆಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸ್ಸಾಂ ಸಹಿತ ಈಶಾನ್ಯ ಭಾರತದಲ್ಲಿ ಪೌರತ್ವ ಮಸೂದೆಯಿಂದ ಹಿಂಸಾಚಾರ ಹೆಚ್ಚಾಗಿದೆ. ಅತ್ಯಾಚಾರ, ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ.ಆದರೂ ಚಿಂತೆ ಇಲ್ಲದ ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, ವೇದಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪಿ.ಚಿದಂಬರಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.