ನವದೆಹಲಿ, ಡಿ 14 (Daijiworld News/MSP): ಸಮಯ ಸಿಕ್ಕಾಗಲೆಲ್ಲಾ ನಿದ್ರಿಸುವ ಅಭ್ಯಾಸವಿದೆಯಾ, ಹಾಗಿದ್ರೆ ನಿಮ್ಮನ್ನು ಎಚ್ಚರಿಸುವ ಸುದ್ದಿ ಇಲ್ಲಿದೆ! ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡುವ ಜನರು ಸ್ಟ್ರೋಕ್ ಗೆ (ಪಾರ್ಶ್ವವಾಯು) ತುತ್ತಾಗುವ ಅಪಾಯವಿದೆ ಎಂದು ಇತ್ತೀಚಿಗೆ ನಡೆದ ಅಧ್ಯಾಯನ ವರದಿಯೊಂದು ಬಹಿರಂಗಪಡಿಸಿದೆ.
ನ್ಯೂರಾಲಜಿ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವು ಇಂಥ ಸಾಧ್ಯತೆಯನ್ನು ಸೂಚಿಸುತ್ತದೆ. ಈ ಅಧ್ಯಯನದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಅರ್ಧಗಂಟೆಗಳ ಕಾಲ ಸಣ್ಣನಿದ್ರೆ ಮಾಡುವ ಜನರಿಗೆ ಹೋಲಿಸಿದರೆ ನಿಯಮಿತವಾಗಿ 90 ನಿಮಿಷಗಳಿಗಿಂತ ಹೆಚ್ಚು ಕಾಲ ನಿದ್ದೆ ಮಾಡುವ ಜನರ ಜೀವಿತಾವಧಿಯಲ್ಲಿ ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ 25 ಶೇಕಡಾಕ್ಕೂ ಹೆಚ್ಚು ಎಂದು ವರದಿ ತಿಳಿಸಿದೆ.
ಈ ಅಧ್ಯಯನ ಸರಾಸರಿ ಚೀನ ದೇಶದ 62 ವರ್ಷ ವಯಸ್ಸಾದವರ, 31,750 ಜನರನ್ನು ಒಳಗೊಂಡಿದ್ದು ಇವರನ್ನು ಆರು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿತ್ತು. ಈ ವೇಳೆ ಒಟ್ಟು 1,557 ಪಾರ್ಶ್ವವಾಯು ಪ್ರಕರಣಗಳು ವರದಿಯಾಗಿವೆ. ಏಳು ಅಥವಾ ಅದಕ್ಕಿಂತ ಕಡಿಮೆ ಗಂಟೆಗಳ ಕಾಲ ಮಲಗಿದ್ದ ಜನರಿಗೆ ಹೋಲಿಸಿದರೆ ರಾತ್ರಿಯಲ್ಲಿ ಒಂಬತ್ತು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಲಗುವ ಜನರು ಸ್ಟ್ರೋಕ್ ಗೆ ಒಳಗಾಗುವ ಸಾಧ್ಯತೆ ಶೇಕಡಾ 23 ರಷ್ಟು ಹೆಚ್ಚು ಎಂಬ ವಿಚಾರ ಅಧ್ಯಯನದಿಂದ ಹೊರಬಿದ್ದಿತ್ತು.
ಮಾತ್ರವಲ್ಲದೆ ಹೆಚ್ಚು ನಿದ್ರಿಸುವರ ದೇಹದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಪ್ರತಿಕೂಲ ಬದಲಾವಣೆ ಕಂಡು ಬಂದು ಸೊಂಟದ ಸುತ್ತಳತೆಯನ್ನು ಹೆಚ್ಚಿಸಿವೆ ಎಂದು ತೋರಿಸಿದೆ, ದೀರ್ಘಾವಧಿಯ ನಿದ್ದೆ ನಿಷ್ಕ್ರಿಯ ಜೀವನಶೈಲಿಯನ್ನು ಸೂಚಿಸುತ್ತಿದ್ದು ಇದು ಪಾರ್ಶ್ವವಾಯು ಹೆಚ್ಚಾಗುವ ಅಪಾಯಕ್ಕೆ ಸಂಬಂಧಿಸಿದೆ ಎಂದು ವರದಿ ಹೇಳಿದೆ.