ಬೆಂಗಳೂರು, ಡಿ 14 (DaijiworldNews/SM): ನಾನು ನನ್ನ ವೈಯುಕ್ತಿಕ ಕೆಲಸದಲ್ಲಿ ತೊಡಗಿಕೊಂಡಿದ್ದು, ಯಾರೊಂದಿಗೂ ಮುನಿಸಿಕೊಂಡಿಲ್ಲ. ಸಿಎಂ ಬಿಎಸ್ ವೈ ಅವರೊಂದಿಗೆ ಕೋಪಿಸಿಕೊಂಡಿಲ್ಲ. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ಅನುಮತಿ ಪಡೆದುಕೊಂಡಿದ್ದೇನೆ. ಅವರಿಗೆ ವಿಚಾರವನ್ನು ತಿಳಿಸಿ ಸಮ್ಮತಿಸಿದ ಬಳಿಕ ನಾನು ತೆರಳಿದ್ದೇನೆ. ನಾನು ಯಾವುದೇ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಆದರೆ ನನ್ನ ಸಮುದಾಯದ ಜನ ನನಗೆ ಡಿಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂಬುವುದಾಗಿ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸಿಎಂ ಯಡಿಯೂರಪ್ಪನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನನಗೆ ಯಾವುದೇ ಅಸಮಾಧಾನವಿಲ್ಲ. ನಾಣು ಸಿಎಂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪಕ್ಷ ಹಾಗೂ ಸಿಎಂ ವಿರುದ್ಧ ನಾನು ನಡೆದುಕೊಂಡಿಲ್ಲ ಎಂಬುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸಭೆ ಸಮಾರಂಭಗಳಲ್ಲಿ ಸಿಎಂ ಇರುವ ವೇದಿಕೆಯಲ್ಲಿ ಶ್ರೀರಾಮುಲು ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆ ಅವರು ಸಿಎಂ ಅವರೊಂದಿಗೆ ಮುನಿಸಿಕೊಂಡಿದ್ದಾರೆ. ಹಾಗೂ ತಮಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಡಿಸಿಎಂ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮಗಳಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳುತ್ತಿಲ್ಲ. ಅವರೊಂದಿಗೆ ಮುನಿಸಿಕೊಂಡಿದ್ದಾರೆ ಎಂಬುವುದಾಗಿ ಸುದ್ದಿ ಪ್ರಸಾರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶನಿವಾರದಂದು ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.