ಬೆಂಗಳೂರು, ಡಿ 15 (Daijiworld News/MB) : ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅವರ ಒಂದೊಂದೆ ವಿಷಯಗಳು ಬಹಿರಂಗವಾಗುತ್ತಿದೆ. ಗುಜರಾತ್ನಲ್ಲಿರುವ ನಿತ್ಯಾನಂದ ಆಶ್ರಮದಲ್ಲಿರುವ ಬಾಲಕ, ಬಾಲಕಿಯರಿಗೆ ನರಕ ಯಾತನೆ ನೀಡಲಾಗುತ್ತಿತ್ತು ಎಂದು ಎನ್ನಲಾಗುತ್ತಿತ್ತೇ ವಿನಹ ಯಾರು ನೇರವಾಗಿ ಹೇಳಿರಲಿಲ್ಲ. ಆದರೆ ಆಶ್ರಮದಿಂದ ಹೊರ ಬಂದ ಈ ಬಾಲಕಿ ಎಲ್ಲಾ ನರಕ ಯಾತನೆಗಳನ್ನು ವಿಡಿಯೋ ಮೂಲಕ ವಿವರಿಸಿದ್ದಾಳೆ.
"ನಿತ್ಯಾನಂದನ ಆಶ್ರಮದಲ್ಲಿ ಅವರದ್ದೇ ಆದ ಕೆಲವು ನಿಯಮಗಳು ಹಾಕಲಾಗಿದೆ. ಅದನ್ನು ಮೀರಿದವರನ್ನು ಕತ್ತಲ ಕೋಣೆಯಲ್ಲಿ ಬಂಧಿಸುತ್ತಾರೆ. ಹಾಗೆಯೇ ಸನ್ಯಾಸಿನಿಯರ ಮೇಲೆ ಅತ್ಯಾಚಾರ ಮಾಡಲಾಗಿದೆ. ಎಲ್ಲರಿಗೂ ಅಲ್ಲಾ ಆದರೆ ಬಹುತೇಕರ ಮೇಲೆ ಅತ್ಯಾಚಾರ ಮಾಡಲಾಗಿದೆ" ಎಂದು ಈ ಬಾಲಕಿ ಹೇಳಿಕೊಂಡಿದ್ದಾಳೆ.
"ಅಲ್ಲಿ ನಡೆದ ಹಲವು ಅತ್ಯಾಚಾರಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಕೆಲವು ಜನರು ವಿದೇಶದಿಂದ ಬಂದು ಕೆಲವೊಂದು ಸ್ಕ್ರೀಪ್ಟ್ಗಳನ್ನು ನೀಡಿ ನಟಿಸುವಂತೆ ಹೇಳುತ್ತಿದ್ದರು. ಅದು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನಟಿಸುವ ನಾಟಕವಾಗಿರುತ್ತಿತ್ತು. ಪೊಲೀಸ್ ಸ್ಟೇಶನ್ಗೆ ಹೋಗ್ತೇವೆ ಎಂದು ಹೇಳಬೇಕಾಗಿತ್ತು. ಇದನ್ನು ರಹಸ್ಯವಾಗಿ ಶೂಟಿಂಗ್ ಮಾಡುತ್ತಿದ್ದರು ಅನಿಸುತ್ತದೆ. ನಾನು ಕೂಡಾ ಒಮ್ಮೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿದ್ದೇನೆ. ಈ ಘಟನೆಗಳು ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಲ್ಲೇ ಇರುತ್ತದೆ" ಎಂದು ತಿಳಿಸಿದ್ದಾಳೆ.
"ನಾನು 2013 ರಿಂದ ನಿತ್ಯಾನಂದ ಆಶ್ರಮದಲ್ಲಿ ಇದ್ದೆ. 7 ವರ್ಷಗಳ ಕಾಲ ಆಶ್ರಮದಲ್ಲೇ ಇದ್ದೆ. ಅನೇಕರಲ್ಲಿ ಗುರುಕುಲ ಸೇರಲು ನಾನು ಹೇಳಿದ್ದೇನೆ. ಯಾಕೆಂದರೆ ಆಶ್ರಮವನ್ನು ನಾನು ಸ್ವರ್ಗವೆಂದೆ ಭಾವಿಸಿದ್ದೆ. 7 ವರ್ಷಗಳ ಕಾಲ ನನಗೆ ಯಾವುದು ತಿಳಿಯಲ್ಲೇ ಇಲ್ಲ. ಆದರೆ 2019 ರಲ್ಲಿ ಎಲ್ಲಾ ಬದಲಾವಣೆ ಆಯಿತು" ಎಂದು ಹೇಳಿದ್ದಾಳೆ.
"ನಾನು ಒಮ್ಮೆ ಆಶ್ರಮದವರ ಮಾತನ್ನು ಕೇಳಲಿಲ್ಲ ಎಂಬ ಕಾರಣಕ್ಕೆ ನನ್ನನ್ನು 2 ತಿಂಗಳುಗಳ ಕಾಲ ಕತ್ತಲ ಕೋಣೆಯಲ್ಲಿ ಬಂಧಿಸಿದ್ದರು. ಸ್ವಾಮೀಜಿಗೆ ಕೇವಲ ಹಣ ಮಾತ್ರ ಬೇಕು. ಹಣ ಸಂಪಾದನೆ ಮಾಡಲು ಕೆಲವು ಪೋಸ್ಟರ್ಗಳನ್ನು ನೀಡುತ್ತಿದ್ದರು. ಹಿಂದೂಯಿಸಂ ಹೆಸರಲ್ಲಿ ಮಧ್ಯರಾತ್ರಿಯಲ್ಲಿಯೂ ಹೋಗಿ ಹಣ ವಸೂಲಿ ಮಾಡಿದ್ದೇವೆ" ಎಂದು ತಿಳಿಸಿದ್ದಾಳೆ.
"ನಾವು ಲಕ್ಷ ಲಕ್ಷ ಹಣ ಪಡೆದು ಆಶ್ರಮಕ್ಕೆ ನೀಡಿದ್ದೇವೆ. ಆದರೆ ನಮಗೆ ಊಟವೂ ಸರಿಯಾಗಿ ಸಿಗುತ್ತಿರಲಿಲ್ಲ. ಊಟದಲ್ಲಿ ಉಪ್ಪು ಖಾರ ಮಾತ್ರವಲ್ಲ ತರಕಾರಿಯೂ ಇರುತ್ತಿರಲಿಲ್ಲ. ತರಕಾರಿಯೇ ಇಲ್ಲದ ಊಟ ಮಾಡಬೇಕಾಗಿತ್ತು. ನಿತ್ಯಾನಂದನಿಗೆ ಗೋಲ್ಡನ್ ಟೆಂಪಲ್ ಮಾಡುವುದೊಂದೆ" ಗುರಿ ಎಂದಿದ್ದಾಳೆ.