ನವದೆಹಲಿ, ಡಿ 15 (Daijiworld News/MB) : "ಭಾರತೀಯ ವಾಯುಸೇನೆ ಬಾಲಾಕೋಟ್ ವಾಯುದಾಳಿ ನಡೆಸಿದ ನಂತರ ಪಾಕಿಸ್ತಾನದ ಸೇನಾ ಕ್ಯಾಂಪ್ ಗಳ ಮೇಲೂ ದಾಳಿಗೆ ಸಿದ್ಧವಾಗಿತ್ತು" ಎಂದು ಭಾರತೀಯ ವಾಯುಸೇನೆಯ ನಿವೃತ್ತ ಮುಖ್ಯಸ್ಥ ಬಿಎಸ್ ಧನೋವಾ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಎಸ್ ಧನೋವಾ ಅವರು, "ನಾನು ಇದೇ ಮೊದಲ ಬಾರಿ ಬಾಲಾಕೋಟ್ ವಾಯುದಾಳಿಯ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಬಾಲಾಕೋಟ್ ವಾಯುದಾಳಿ ಕುರಿತ ಪ್ರಸ್ತಾವನೆ ಸಂದರ್ಭದಲ್ಲೇ ಎಲ್ಲಾ ರೀತಿಯ ಪ್ರತಿಕ್ರಿಯೆಗಳಿಗೆ ಭಾರತ ಸಿದ್ಧವಾಗಿತ್ತು. ಪಾಕಿಸ್ತಾನ ಸೇನೆ ವಾಯುದಾಳಿ ನಂತರ ಭಾರತದ ಮೇಲೆ ದಾಳಿ ಮಾಡಲು ಮಂದಾದರೆ ಪಾಕಿಸ್ತಾನದ ಎಲ್ಲ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲು ನಾವೂ ಕೂಡ ಸಿದ್ಧರಾಗಿದ್ದೆವು" ಎಂದು ಹೇಳಿದ್ದಾರೆ.
"ಬ್ರಹ್ಮೋಸ್ ಅಣು ಕ್ಷಿಪಣಿ ಸಹಿತ ಸುಖೋಯ್ 30 ಯುದ್ಧ ವಿಮಾನಗಳೂ ಕೂಡ ಯಾವುದೇ ಕ್ಷೇಣದಲ್ಲಿ ಟೇಕ್ ಆಫ್ ಆಗಲೂ ಸಜ್ಜಾಗಿದ್ದವು. ನಮ್ಮ ಸೇನೆಯ ಎಲ್ಲಾ ದಳಗಳು ದಾಳಿ ನಡೆಸಲು ಸಜ್ಜಾಗಿತ್ತು. ನಮ್ಮ ಜೆಟ್ ಗಳನ್ನು ಪಾಕಿಸ್ತಾನವೇನಾದರೂ ಹೊಡೆದುರುಳಿಸಲು ಕ್ಷಿಪಣಿಗಳನ್ನು ಪ್ರಯೋಗಿಸದರೆ ಅವುಗಳನ್ನು ನಾಶ ಮಾಡಲು ಕ್ಷಿಪಣಿ ನಾಶಕಗಳನ್ನು ನಾವು ಸಿದ್ಧವಾಗಿಟ್ಟುಕೊಂಡಿದ್ದೆವು" ಎಂದು ವಿವರಿಸಿದ್ದಾರೆ.