ಜೈಪುರ, ಡಿ 15 (Daijiworld News/MB) : ತನ್ನ ಪೆನ್ ನನಗೆ ವಾಪಸ್ ಕೊಡು ಎಂದು ಮನೆಗೆ ಬಂದು ಹೇಳಿದ ಗೆಳತಿಯನ್ನೇ 10 ವರ್ಷದ ಬಾಲಕಿ ರಾಡ್ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಶನಿವಾರ 12 ವರ್ಷದ ಬಾಲಕಿ ತನ್ನ ಕ್ಲಾಸ್ಮೇಟ್ ಮನೆಗೆ ಹೋಗಿದ್ದು ಆ ವೇಳೆ ಬಾಲಕಿ ಮನೆಯಲ್ಲಿ ಪೋಷಕರು ಇರಲಿಲ್ಲ. ಆ ಸಂದರ್ಭದಲ್ಲಿ ಶಾಲೆಯಲ್ಲಿ ತನ್ನಿಂದ ಕಸಿದುಕೊಂಡಿದ್ದ ಪೆನ್ಅನ್ನು ವಾಪಸ್ ನೀಡು ಎಂದು ಗೆಳತಿ ಕೇಳಿದ್ದು ಆ ವಿಷಯದಲ್ಲಿ ಇಬ್ಬರ ನಡುವೆ ಜನಳ ನಡೆದಿದೆ. ಕುಪಿತಗೊಂಡ ಬಾಲಕಿ ಗೆಳತಿಗೆ ರಾಡ್ನಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಗೆಳತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ತಾಯಿ ಮನೆಗೆ ಬಂದಾಗ ಬಾಲಕಿಯು ಈ ಕುರಿತು ತಿಳಿಸಿದ್ದು ಮಗಳನ್ನು ಕಾಪಾಡುವ ದೃಷ್ಟಿಯಿಂದ ತಾಯಿ ಮೃತದೇಹಕ್ಕೆ ಕಲ್ಲನ್ನು ಕಟ್ಟಿ ಕೊಳವೊಂದರಲ್ಲಿ ಎಸೆದು ಬಂದಿದ್ದಳು. ನಂತರ ಪತಿ ಮನೆಗೆ ಬಂದಾಗ ಮಗಳ ಈ ಕೃತ್ಯದ ಕುರಿತು ತಿಳಿಸಿದ್ದು ಆತ ಕೊಳದಲ್ಲಿದ್ದ ಮೃತದೇಹವನ್ನು ಹೊರತೆಗೆದು ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದು ಸಾಕ್ಷ್ಯಗಳನ್ನು ನಾಶ ಮಾಡಿದ್ದನು.
ಸಂಜೆಯಾದರೂ ಮಗಳು ಮನೆಗೆ ಬಾರದನ್ನು ನೋಡಿ ಪೋಷಕರು ಹುಡುಕಾಟ ನಡೆಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಮಡು ತನಿಖೆ ನಡೆಸಿದ ಪೊಲೀಸರಿಗೆ ಹುಡುಕಾಟ ನಡೆಸಿದಾಗ ಗುರುವಾರ ಮೃತದೇಹ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.
ಈ ಕುರಿತು ತನಿಖೆ ನಡೆಸಿದಾಗ 10ರ ಬಾಲಕಿ ಕ್ಲಾಸ್ ಮೇಟ್ನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಕಿಯನ್ನು ಹಾಗೂ ಕೃತ್ಯದ ಸಾಕ್ಷ್ಯ ನಾಶ ಮಾಡಿದ್ದಕ್ಕೆ ಆಕೆಯ ಹೆತ್ತವರನ್ನು ಪೊಲೀಸರು ಬಂಧಿಸಿದ್ದಾರೆ.