ರಾಂಚಿ, ಡಿ 15 (Daijiworld News/MB) : "ಈಶಾನ್ಯ ರಾಜ್ಯಗಳ ಕಳಕಳಿಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಕೆಲವು ಅಂಶಗಳನ್ನು ಬದಲಾವಣೆ ಮಾಡಲು ಸಿದ್ಧ" ಎಂದು ಅಮಿತ್ ಶಾ ಗಿರಿಧ್ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ತಿಳಿಸಿದ್ದಾರೆ.
"ಶುಕ್ರವಾರ ಸಂಪುಟ ಸಚಿವರು ಹಾಗೂ ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ, ಪೌರತ್ವ ತಿದ್ದುಪಡಿ ಮಸೂದೆಯಿಂದ ರಾಜ್ಯಕ್ಕೆ ಎದುರಾಗುವ ಸಮಸ್ಯೆಗಳ ಕುರಿತು ಹೇಳಿದ್ದಾರೆ. ನಾನು ಆ ಸಮಸ್ಯೆ ಇಲ್ಲ ಎಂಬುದನ್ನು ಮನವರಿಕೆ ಮಾಡಲು ಪ್ರಯತ್ನ ಮಾಡಿದ್ದೇನೆ. ಕಾಯ್ದೆಯಲ್ಲಿ ಕೆಲವು ಬದಲಾವಣೆ ತರಬೇಕು ಎಂದು ಒತ್ತಡ ಹೇರಿದ ಹಿನ್ನಲೆಯಲ್ಲಿ ಕ್ರಿಸ್ಮಸ್ ಬಳಿಕ ಭೇಟಿಯಾಗಲು ತಿಳಿಸಿದ್ದು ಈ ಕುರಿತು ಚರ್ಚೆ ನಡೆಸಿ ಮೇಘಾಲಯದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದೇನೆ" ಎಂದು ಹೇಳಿದ್ದಾರೆ.
ಬಳಿಕ ಧನಬಾದ್ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, "ಪೌರತ್ವ ತಿದ್ದುಪಡಿ ಮಸೂದೆಯನ್ನು ನಾವು ಮಂಡಿಸಿದಾಗ ಕಾಂಗ್ರೆಸ್ನವರಿಗೆ ಹೊಟ್ಟ ನೋವು ಆರಂಭವಾಗಿದೆ. ಹಲವು ವರ್ಷಗಳಿಂದ ಇತರ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಘಿ ಎಷ್ಟೋ ನಿರಾಶ್ರಿತರು ಬದುಕುತ್ತಿದ್ದಾರೆ. ಅವರಿಗೆ ಪೌರತ್ವ ನೀಡುವುದು ಬೇಡವೇ? ಕಾಂಗ್ರೆಸ್ನವರು ನಾವು ಮುಸ್ಲಿಂ ವಿರೋಧಿಗಳೆಂದು ಹೇಳುತ್ತಿದ್ದಾರೆ. ನಾವು ಈ ಮಸೂದೆಯನ್ನು ತಂದಾಗ ಅವರು ಈಶಾನ್ಯ ರಾಜ್ಯಗಳಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಅವರು ಹಿಂದೂ ಮುಸ್ಲಿಂ ರಾಜಕೀಯ ನಡೆಸುತ್ತಿದ್ದಾರೆ ಹಾಗೂ ನಕ್ಸಲೀಯತೆಗೆ ಪ್ರಚೋದನೆ ನೀಡುತ್ತಿದ್ದಾರೆ" ಎಂದು ದೂರಿದರು.