ರಾಯಚೂರು, ಡಿ 15 (Daijiworld News/MB) : "ರಾಜ್ಯದಲ್ಲಿ ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂಬುದು ಸತ್ಯಕ್ಕೆ ದೂರವಾದ ಮಾತು, ಅದು ಮಾಧ್ಯಮಗಳು ಮಾಡಿರುವ ಸೃಷ್ಟಿ" ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮತಾನಾಡಿದ ಅವರು, "ಸಚಿವ ಸಂಪುಟ ಪುನರ್ ರಚನೆಯಲ್ಲಿ ಗೊಂದಲಗಳಿಲ್ಲ. ಪಕ್ಷದ ನಾಯಕರಿಗೆ ಅಸಮಾಧಾನವಾಗಿದೆ ಎಂದು ಹೇಳುವುದೆಲ್ಲಾ ಊಹಾಪೋಹ ವಿಚಾರ. ನಾನು ದೆಹಲಿಗೆ ಹೋದದ್ದು ಸ್ಥಾನಮಾನ ದೊರಕಲು ಅಲ್ಲ" ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮಾತಾನಾಡಿ, "ಈ ಮಸೂದೆಯಿಂದ ದೇಶದ ಯಾವ ಸಮುದಾಯಕ್ಕೂ ತೊಂದರೆ ಉಂಟಾಗುವುದಿಲ್ಲ. ಕೆಲವರು ಮಸೂದೆ ಕುರಿತು ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾರು ಕೂಡಾ ಆತಂಖ ಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರದಿಂದ 2ನೇ ಹಂತದ ಪರಿಹಾರ ಬಂದ ನಂತರ ನೆರೆ ಹಾನಿಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ಹಣ ಜಮಾ ಮಾಡಲಾಗುವುದು. ಸಾರಿಗೆ ಇಲಾಖೆಯಿಂದ 1200 ನೂತನ ಬಸ್ ಖರೀದಿಗೆ ಚಿಂತನೆ ನಡೆದಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಬಸ್ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ಜೊತೆಗಿದ್ದರು.