ಬೆಂಗಳೂರು, ಡಿ 15 (Daijiworld News/MB) : ಕಳೆದ 5 ದಿನಗಳಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನಾನೀಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ವೈದ್ಯರು ಒಂದು ವಾರ ವಿಶ್ರಾಂತಿ ಮಾಡಲು ಹೇಳಿದ್ದಾರೆ. ಹಾಗಾಗಿ ಒಂದು ವಾರ ಮನೆಯಲ್ಲಿದ್ದು ನಂತರ ರಾಜಕೀಯ ಜೀವನಕ್ಕೆ ಮರಳಿ ಬರುವೆ ಎಂದು ಹೇಳಿದ್ದಾರೆ.
ಆಸ್ಪತ್ರೆಯ ವೈದ್ಯರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, 2000ನೇ ಇಸವಿ ಆಗಸ್ಟ್ ತಿಂಗಳಲ್ಲಿ ನನಗೆ ಎರಡೂ ರಕ್ತನಾಳಗಳು ಬ್ಲಾಕ್ ಆಗಿದ್ದು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೊಪ್ಲಾಸ್ಟಿ ಮಾಡಿಸಿ ಸ್ಟಂಟ್ ಅಳವಡಿಸಲಾಗಿತ್ತು. ಈಗ 19 ವರ್ಷ ಕಳೆದ ನಂತರ ಈ 2 ರಕ್ತನಾಳಗಳ ಪೈಕಿ ಒಂದು ಶೇಕಡಾ 95ರಷ್ಟು ಬ್ಲಾಕ್ ಆಗಿತ್ತು. ಅದಕ್ಕಾಗಿ ಆಂಜಿಯೊಪ್ಲಾಸ್ಟಿ ಚಿಕಿತ್ಸೆ ಮಾಡುವಂತೆ ವೈದ್ಯರು ಹೇಳಿದ್ದರು. ಹಾಗಾಗಿ ಚಿಕಿತ್ಸೆ ಪಡೆದು ರಕ್ತ ಚಲನೆಯಾಗುವಂತೆ ಮಾಡಿ ನಂತರ ಸ್ಟಂಟ್ ಅಳವಡಿಸಿದ್ದಾರೆ. ನಾನೀಗ ಸಂಪೂರ್ಣ ಗುಣಮುಖನಾಗಿದ್ದು ಯಾರೂ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು.
ಎಲ್ಲಾ ಪಕ್ಷದವರು ಮನುಷ್ಯತ್ವದಿಂದ ನನ್ನನ್ನು ನೋಡಲು ಬಂದಿದ್ದಾರೆ. ಅವರಿಗೆಲ್ಲರಿಗೂ ಧನ್ಯವಾದ . ರಾಜಕಾರಣದಲ್ಲಿ ಯಾರೂ ಶಾಶ್ವತವಾಗಿ ವೈರಿಗಳೂ ಆಗಿರುವುದಿಲ್ಲ, ಸ್ನೇಹಿತರೂ ಆಗಿರುವುದಿಲ್ಲ. ಹಲವರು ನಾನು ಶೀಘ್ರ ಗುಣಮುಖನಾಗಲೆಂದು ಪ್ರಾರ್ಥನೆ ಮಾಡಿದ್ದಾರೆ. ಹಾಗೆಯೇ ಪ್ರಸಾದವನ್ನು ತಂದುಕೊಟ್ಟಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು ಎಂದರು.