ರಾಯಚೂರು, ಡಿ 15 (DaijiworldNews/SM): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಅನಗತ್ಯ ಗೊಂದಲಪಡುವ ಅವಶ್ಯಕತೆ ಇಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕಾಯ್ದೆ ಜಾರಿಯಾಗತ್ತಲೇ ದೇಶದೆಲ್ಲೆಡೆ ಬೃಹತ್ ಪ್ರತಿಭಟನೆ, ಹೋರಾಟ ನಡೆದಿದೆ. ಆದರೆ, ಯಾವುದೇ ವ್ಯಕ್ತಿಗೆ ಇದರಿಂದ ತೊಂದರೆಯಾಗದು. ಪ್ರಮುಖವಾಗಿ ಮುಸ್ಲಿಂ ಸಮುದಾಯದವರು ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದಿರುವ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ಅಭಿಮಾನದಿಂದ ಪೌರತ್ವ ನೀಡಲಾಗುತ್ತಿದೆ. ಇನ್ನು ಭಾರತದಲ್ಲಿ ಅನೇಕ ದಶಕಗಳಿಂದ ವಾಸವಾಗಿರುವವರಿಗೆ ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅನವಶ್ಯಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು.
ಈಶಾನ್ಯ ರಾಜ್ಯಗಳ ನಿವಾಸಿಗಳಿಗೆ ಅವರ ಪ್ರಾದೇಶಿಕ ಆಸ್ಮಿತತೆಗೆ ಧಕ್ಕೆ ಬರುತ್ತದೆ ಎಂಬ ಆತಂಕವಿದೆ. ಹಾಗಾಗಿಯೇ ಅಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಸೇನೆ ಬಳಸಿ ನಿಯಂತ್ರಿಸುವ ಬದಲು ಮನವರಿಕೆ ಮಾಡಿಕೊಟ್ಟು ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಹಿಂದೂಗಳಿಗೆ ಅವರದ್ದೇ ಆದ ದೇಶ ಎಂದರೆ ಅದು ಭಾರತ. ವಲಸೆ ಬಂದಿರುವ ಹಿಂದೂಗಳಿಗೆ ಏಕೈಕ ಆಶ್ರಯವೆಂದರೆ ಅದು ಭಾರತ ಮಾತ್ರ. ಕೇಂದ್ರ ಸರಕಾರ ಇದೇ ಉದ್ದೇಶವನ್ನು ಹೊಂದಿಕೊಂಡಿದೆ. ಬಾಂಗ್ಲಾದಿಂದ ವಲಸೆ ಬಂದಿರುವವರಿಗೆ ಪಶ್ಚಿಮ ಬಂಗಾಳದಲ್ಲೇ ಆಶ್ರಯ ನೀಡಬೇಕೆಂದರು. ಇನ್ನು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ದೇಶದಿಂದ ಹೊರಗೆ ಕಳುಹಿಸಲು ಈ ಕಾಯ್ದೆ ಸೂಕ್ತವಾಗಲಿದೆ.