ನವದೆಹಲಿ, ಡಿ 16 (Daijiworld News/MB) : "ದೇಶದಲ್ಲಿ ಮೋದಿ ಸರಕಾರವು ತನ್ನ ಸರ್ವಾಧಿಕಾರದ ಧೋರಣೆಯಿಂದ ದೇಶದ ಯುವಜನತೆಯ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಸರಕಾರ ಜನರ ಧ್ವನಿಗೆ ಭಯ ಪಡುತ್ತದೆ" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ ಮಾಡಿದ್ದಾರೆ.
ಭಾನುವಾರ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ ವಾದ್ರಾ, "ಮೋದಿ ಸರಕಾರವು ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ವಿಶ್ವವಿದ್ಯಾನಿಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಕೇಳಿ ಮೋದಿಯವರೇ ಇಂದಲ್ಲದಿದ್ದರೆ ನಾಳೆ ಯುವಜನರ ಧ್ವನಿ ಕೇಳಬೇಕಾಗುತ್ತದೆ" ಎಂದು ಹೇಳಿದ್ದಾರೆ.
"ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ ಸಂದರ್ಭದಲ್ಲಿ ಸರಕಾರ ಜನರ ಮಾತನ್ನು ಕೇಳಬೇಕು. ಆದರೆ ಈ ಬಿಜೆಪಿ ಸರಕಾರ ಈಶಾನ್ಯ ರಾಜ್ಯ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ" ಎಂದು ದೂರಿದ್ದಾರೆ.