ಬೆಂಗಳೂರು, ಡಿ 16(Daijiworld News/MSP): ಹೈಕೋರ್ಟ್’ನ ವಿಚಕ್ಷಣ ದಳ ಜಡ್ಜ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಈ ವೇಳೆ 9 ಕೋಟಿ ರೂಪಾಯಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ದಾಳಿಯನ್ನು ಹೈಕೋರ್ಟ್ ಚೀಫ್ ಜಸ್ಟಿಸ್ ಅಭಯ್ ಎಸ್.ಓಕಾ ಅವರ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ. ಕಾರ್ಯವೈಖರಿ ಬಗ್ಗೆ ಮತ್ತು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದ ವಿಚಾರಣಾ ನ್ಯಾಯಾಲಯಗಳ 48 ನ್ಯಾಯಾಧೀಶರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿದ ನಂತರ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ನೊಟೀಸ್ ಗೆ ಉತ್ತರ ನೀಡೀ ಇಲ್ಲವೇ "ಹುದ್ದೆ ತ್ಯಜಿಸಿ" ಎಂದು ಓಕಾ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು ಭ್ರಷ್ಟ ರಹಿತ, ಸ್ವಚ್ಚ ನ್ಯಾಯಾಂಗ ವ್ಯವಸ್ಥೆಗಾಗಿ ಸುಧಾರಣೆಗಳನ್ನು ತರುತ್ತಿದ್ದು, ಕಳೆದ ಮೂರು ತಿಂಗಳುಗಳಲ್ಲಿ 48 ನ್ಯಾಯಾಧೀಶರ ವಿರುದ್ಧ ನಿರಂತರ ಆರೋಪಗಳ ನಂತರ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಪ್ರಾಧಿಕಾರವು ನ್ಯಾಯಾಧೀಶರನ್ನು ಕರೆದು ವಿಚಾರಣೆ ನಡೆಸಿ ಆರೋಪಗಳಿಗೆ ಸಮರ್ಪಕ ಉತ್ತರ ನೀಡದ ನ್ಯಾಯಾಧೀಶರನ್ನು ಸೇವೆಯಿಂದ ಹೊರಗುಳಿಯುವಂತೆ ಸೂಚಿಸಿಲಾಗಿದೆ ಎಂದು ತಿಳಿದುಬಂದಿದೆ. ಈ ಕ್ರಮವು ರಾಜ್ಯದ "ಭ್ರಷ್ಟ ನ್ಯಾಯಾಧೀಶರಿಗೆ" ಕಠಿಣ ಎಚ್ಚರಿಕೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ವಿಚಕ್ಷಣ ದಳ ನಡೆಸಿದ ದಾಳಿ ಕುರಿತು ವಿವರವಾದ ವರದಿಯನ್ನು ಸೋಮವಾರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಿದೆ. ಈಗಾಗಲೇ ಸುಮಾರು 25 ನ್ಯಾಯಾಧೀಶರು ಸ್ವಯಂ ನಿವೃತ್ತಿಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ದಾಳಿ ಬಗ್ಗೆ ಇನ್ನೂ ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಿಲ್ಲ.