ನವದೆಹಲಿ, ಡಿ 16(Daijiworld News/MSP): "ಹಿಂಸಾಚಾರ ಗಲಭೆ ನಿಲ್ಲಿಸಿದ ಬಳಿಕವೇ ಅರ್ಜಿಯ ವಿಚಾರಣೆ " ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಸೋಮವಾರ ಖಡಕ್ ಸಂದೇಶ ರವಾನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರದ ಘಟನೆ ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರಮದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, " ಸ್ವತಂತ್ರ ತನಿಖೆ " ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಆದರೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಗಲಭೆ ನಿಂತರಷ್ಟೇ ನ್ಯಾಯಾಲಯ ತನಿಖೆ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು, ಕಲ್ಲು ತೂರಾಟ ಬಸ್ಸಿಗೆ ಬೆಂಕಿ, ಗಲಾಟೆ ನಡೆಸುವುದು ಹಿಂಸಾಚಾರ ಎಲ್ಲವನ್ನು ನಿಲ್ಲಿಸಿದ್ರೆ ಮಾತ್ರ ನಾಳೆ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ. ವಿದ್ಯಾರ್ಥಿಗಳು ಅಂದ ಮಾತ್ರಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ, ಯಾರಿಗೂ ಕಾನೂನು, ಸುವ್ಯವಸ್ಥೆಯನ್ನು ಉಲ್ಲಂಘಿಸಲು ಅನುಮತಿ ಕೊಟ್ಟಿಲ್ಲ ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಕಾನೂನು, ಸುವ್ಯವಸ್ಥೆಯನ್ನು ಉಲ್ಲಂಘಿಸಲು ಯಾರಿಗೂ ಅನುಮತಿ ಕೊಟ್ಟಿಲ್ಲ, ನಮಗೆಲ್ಲರಿಗೂ ಗಲಭೆ ಹೇಗಾಯಿತು ಎಂದು ಗೊತ್ತಿದೆ, ಇವೆಲ್ಲಾ ನಿಲ್ಲಬೇಕು, ಏನಿದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಮಾಡಲಾಗುತ್ತಿದೆ ಎಂದು ಛೀಮಾರಿ ಹಾಕಿದರು.ವಿದ್ಯಾರ್ಥಿಗಳು ಎಂದ ಮಾತ್ರಕ್ಕೆ ಕಾನೂನನ್ನು ತಮಗೆ ಬೇಕಾದಂತೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಯದಿದ್ದರೆ ನಾಳೆ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದರು.
ವಿದ್ಯಾರ್ಥಿಗಳು ತಮ್ಮನ್ನು ತಾವು ಹಿಂಸಾಚಾರದಲ್ಲಿ ತೊಡಗಿಸಿಕೊಂಡರೆ ನ್ಯಾಯಾಲಯಕ್ಕೆ ಬರುವ ಅಗತ್ಯವಿಲ್ಲ. ವಿಚಾರಣೆ ನಡೆಸಲೆಂದು ಹೀಗೆ ಬೆದರಿಕೆ ಹಾಕಿದರೆ ನಾವು ಕೇಳಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಖಡಕ್ ಆಗಿ ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಕೊಲಿನ್ ಗೊನ್ಸಲ್ವೆಸ್ ಅವರಿಗೆ ನಿರ್ದೇಶನ ನೀಡಿದರು.