ಜೈಪುರ, ಡಿ 16 (Daijiworld News/PY) : 50 ಪೈಸೆಗಾಗಿ ಬ್ಯಾಂಕ್ ಅಧಿಕಾರಿಗಳು ಮನೆಬಾಗಿಲಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ಅನ್ನು ಅಂಟಿಸಿ ಹೋದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ನೂರಾರು ಉದ್ಯಮಿಗಳು ಸಾವಿರಾರು ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದು, ಈ ಕಡೆ 50 ಪೈಸೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಗ್ರಾಹಕ ಜಿತೇಂದ್ರ ಸಿಂಗ್ ಅವರಿಗೆ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ.
ಹೌದು, ರಾಜಸ್ಥಾನದ ಜಿತೇಂದ್ರ ಸಿಂಗ್ ಅವರು 50 ಪೈಸೆ ಸಾಲ ಪಾವತಿಸಲು ಬಾಕಿ ಇದ್ದು ಅದನ್ನು ಶೀಘ್ರವೇ ಪಾವತಿಸಿ ಇಲ್ಲದಿದ್ದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಸಂದೇಶದೊಂದಿಗೆ ಒಂದು ನೋಟಿಸ್ ಅನ್ನು ರಾತ್ರೋರಾತ್ರಿ ಬ್ಯಾಂಕ್ ಅಧಿಕಾರಿಗಳು ಜಿತೇಂದ್ರ ಸಿಂಗ್ ಅವರ ಮನೆಬಾಗಿಲಿಗೆ ತೆರಳಿ ಅಂಟಿಸಿ ಹೋಗಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿತೇಂದ್ರ ಸಿಂಗ್ 50 ಪೈಸೆಯನ್ನು ಪಾವತಿಸಲು ಬ್ಯಾಂಕ್ ಗೆ ಹೋದರೆ ಅದನ್ನು ತೆಗೆದುಕೊಳ್ಳಲು ಬ್ಯಾಂಕ್ ಒಪ್ಪುತ್ತಿಲ್ಲ, ಅಲ್ಲದೇ ನನಗೆ ಬೆನ್ನು ಹುರಿಯ ಸಮಸ್ಯೆ ಇದ್ದ ಕಾರಣ, ನನ್ನ ತಂದೆ ಈ ಮೊತ್ತವನ್ನು ಪಾವತಿಸಲು ಬ್ಯಾಂಕ್ ಗೆ ತೆರಳಿ ನಿರಾಪೇಕ್ಷಣಾ ಪತ್ರ ಪಡೆಯಲು ಮುಂದಾಗಿದ್ದರು. ಈ ಬಾಕಿ ಮೊತ್ತವನ್ನು ಪಡೆದುಕೊಳ್ಳಲು ಬ್ಯಾಂಕ್ ನವರೆ ಒಪ್ಪುತ್ತಿಲ್ಲ ಆದ್ದರಿಂದ ನಾನು ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.