ಬೆಂಗಳೂರು, ಡಿ 16(Daijiworld News/MSP): ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಶಾಪಿಂಗ್ ಸಂದರ್ಭ , ಬಿಲ್ಲಿಂಗ್ ಮಾಡುವ ವೇಳೆ ಹೀಗೆ ಸಿಕ್ಕಸಿಕ್ಕಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡುವ ಅಭ್ಯಾಸ ನಿಮಗಿದ್ರೆ ಅದನ್ನು ಈಗಲೇ ತಕ್ಷಣ ಬದಲಾಯಿಸಿಕೊಳ್ಳಿ. ಯಾಕೆಂದರೆ ನಿಮ್ಮ ಮೊಬೈಲ್ ನಂಬರ್ ನ ಮಾಹಿತಿ ನೀಡಿದ್ರೆ ನೀವಾಗಿಯೇ ಹ್ಯಾಕರ್ಗಳಿಗೆ ಮನೆಯ ಕೀ ಕೊಟ್ಟಂತಾಗಬಹುದು.
ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚಾಗುತ್ತಿತ್ತು, ಇದನ್ನು ತಡೆಗಟ್ಟಲು ಗ್ರಾಹಕರೇ ಎಚ್ಚರಿಕೆ ವಹಿಸಬೇಕು. " ಮಾಲ್ಗಳಲ್ಲಿ, ಅಂಗಡಿಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಮೊಬೈಲ್ ಸಂಖ್ಯೆ ನೀಡುವುದು ಸೈಬರ್ ಕ್ರೈಂ ಘಟನೆಗಳಿಗೆ ಆಹ್ವಾನ ನೀಡಿದಂತೆ " ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.
ಶಾಪಿಂಗ್ ಮಾಲ್ಗಳಲ್ಲಿ ಹೆಚ್ಚಾಗಿ ನಿಮ್ಮ ಪ್ರತಿ ಖರೀದಿಗೆ ಪಾಯಿಂಟ್ಸ್ ನೀಡುತ್ತೇವೆ, ಸ್ಪೆಷಲ್ ಡಿಸ್ಕೌಂಟ್ ಇದೆ ಎಂದು ನಂಬರ್ ಪಡೆಯುವುದು, ಅಥವಾ ಇನ್ಯಾವುದೋ ನೆಪದಲ್ಲು ಗ್ರಾಹಕರ ಮೊಬೈಲ್ ನಂಬರ್ ಪಡೆಯಲಾಗುತ್ತದೆ. ಹೆಚ್ಚಿನ ಗ್ರಾಹಕರು ಅದೇ ಮೊಬೈಲ್ ನಂಬರ್ ಅನ್ನು ಬ್ಯಾಂಕ್, ಆಧಾರ್ , ಗೂಗಲ್ ಪೇ, ಹಣ ವರ್ಗಾಯಿಸುವ ಆಪ್ ಗಳಿಗೆ ರಿಜಿಸ್ಟರ್ ಮಾಡಿರುತ್ತಾರೆ. ಹೀಗೆ ಗ್ರಾಹಕರು ನೀಡುವ ಮೊಬೈಲ್ ನಂಬರ್ಗಳನ್ನು ಸಂಗ್ರಹಿಸಿ ಡೇಟಾ ಬೇಸ್ ರೂಪಿಸಿ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ಇದೊಂದು ದಂಧೆಯಾಗಿ ಮಾರ್ಪಟ್ಟಿದೆ.
ಮೊಬೈಲ್ ನಂಬರ್ ನೀಡುವುದರಿಂದ ನಿಮ್ಮ ಆಧಾರ್ ನಂಬರ್, ಮನೆ ವಿಳಾಸ ತಿಳಿಯುತ್ತದೆ ಹ್ಯಾಕರ್ ಗಳಿಗೆ ಸುಲಭವಾಗಿ ಸಿಗುತ್ತದೆ. ಇದರಿಂದ ಹ್ಯಾಕ್ ಮಾಡಲು ಸಹಾಯವಾಗುತ್ತದೆ. ಹೀಗಾಗಿ ಸಾರ್ವಜನಿಕರು ಶಾಪಿಂಗ್ ವೇಳೆ ಮೊಬೈಲ್ ನಂಬರ್ ನೀಡುವುದನ್ನು ನಿರಾಕರಿಸಬೇಕು ಎನ್ನುವ ಸಲಹೆಯನ್ನು ಅವರು ನೀಡಿದ್ದಾರೆ.