ತುಮಕೂರು, ಡಿ 16 (Daijiworld News/MB) : ತಾಲಿಬಾನಿಗಳು, ಕಾಂಗ್ರೆಸಿಗರು ಹಾಗೂ ಕಮ್ಯೂನಿಸ್ಟರು ಒಟ್ಟಿಗೆ ಸೇರಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಸಚಿವ ಸಿಟಿ ರವಿ ಆರೋಪ ಮಾಡಿದ್ದಾರೆ.
ಸೋಮವಾರ ಅವರು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು ಆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಕಾಂಗ್ರೆಸ್ ಹಾಗೂ ಕಮ್ಯೂನಿಷ್ಟರು ಮೋದಿ ಸರಕಾರವನ್ನು ಉರುಳಿಸುವ ಉದ್ದೇಶದಿಂದ ತಾಲಿಬಾನಿಗಳ ಜೊತೆ ಸೇರಿಕೊಂಡಿದ್ದಾರೆ. ಹಾಗೆ ಮಾಡಲು ದೇಶದ ಜನರು ಅವಕಾಶ ಮಾಡಿ ಕೊಡುವುದಿಲ್ಲ. ನಮಗೆ ಇವರ ಎಲ್ಲಾ ಹುನ್ನಾರಗಳು ತಿಳಿದಿದೆ. ಅದನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಹೇಳಿದ್ದಾರೆ.
ಧಾರ್ಮಿಕ ಹಾಗೂ ಭಯೋತ್ಪಾದಕ ಕಾರಣದಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ಥಾನದಿಂದ ಭಾರತಕ್ಕೆ ಬಂದವರು ನಿರಾಶ್ರಿತರು. ಅವರ ಎದುರು ಇದದ್ದು ಮೂರೇ ದಾರಿ ಸಾವು, ಮತಾಂತರಗೊಳ್ಳುವುದು, ಪೂರ್ಜಜರನ್ನು ತೊರೆಯುವುದು. ಇಂತಹ ಕಷ್ಟದಲ್ಲಿರುವ ನಿರಾಶ್ರಿತರಿಗೆ ಭಾರತ ಆಶ್ರಯ, ಪೌರತ್ವ ನೀಡದಿದ್ದರೆ ಮತ್ತೆ ಯಾರು ಕೊಡಬೇಕು ಎಂದು ನಾನು ಈ ಮಸೂದೆಯನ್ನು ವಿರೋಧ ಮಾಡುವವರಲ್ಲಿ ಕೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನಿರಾಶ್ರಿತರಿಗೆ ಪೌರತ್ವ ನೀಡುವುದು ತಪ್ಪು ಎಂದು ಹೇಳುವುದಾದರೆ ಕಾಂಗ್ರೆಸ್ ಅಂದು ಪಾಕಿಸ್ಥಾನ ರಚನೆ ಮಾಡಲು ಹೇಗೆ ಅವಕಾಶ ನೀಡಿತು. ಅಂದು ಅವರು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದ ಪರಿಣಾಮದಿಂದಾಗಿ ಇಂದು ಜನರಿಗೆ ಈ ಸಂಕಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಮ್ಮ ಹಿಂದೂ, ಸಿಖ್, ಬೌದ್ಧ, ಕ್ರೈಸ್ತರ ಅಲ್ಪಸಂಖ್ಯಾತರಾದ ಕಾರಣಕ್ಕೆ ನಾವು ಅವರಿಗೆ ಪೌರತ್ವ ನೀಡುವ ತಿರ್ಮಾನ ಮಾಡಿದ್ದೇವೆ. ಈಗ ಇದನ್ನು ವಿರೋಧ ಮಾಡುವಷ್ಟೆ ಅಂದು ಪಾಕಿಸ್ತಾನ ರಚನೆಗೆ ವಿರೋಧ ಮಾಡಿದ್ರೆ ಪಾಕಿಸ್ತಾನ ದೇಶ ಉಟ್ಟುತ್ತಿರಲಿಲ್ಲ. ಕಾಂಗ್ರೆಸ್ನ ಪಾಪದ ಕೂಸು ಪಾಕಿಸ್ತಾನ, ಅದಕ್ಕೆ ಅವರೇ ಹೊಣೆ ಎಂದರು.
ಕಾಂಗ್ರೆಸ್ನವರು ಭಯೋತ್ಪಾದಕರಿಗೆ ಪೌರತ್ವ ನೀಡಲು ಭಯಸುತ್ತಿದ್ದಾರೆ. ನಾವು ಭಯೋತ್ಪಾದಕರಿಗೆ ಪೌರತ್ವ ನೀಡಿದರೆ ನಮ್ಮ ದೇಶದ ಪರಿಸ್ಥಿತಿ ಏನಾಗಬಹುದು?. ದೇಶದ ನಾಗರಿಕರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ನಾವು ಅದನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಶೇ.23 ರಷ್ಟು ಹಿಂದೂಗಳು ಪಾಕಿಸ್ತಾನ ದೇಶ ರಚನೆಯಾದ ಸಂದರ್ಭದಲ್ಲಿ ಅಲ್ಲಿ ಇದ್ದರು. ಆದರೆ ಪ್ರಸ್ತುತ ಬರಿ ಶೇ.2 ರಷ್ಟು ಹಿಂದೂಗಳು ಪಾಕಿಸ್ತಾನದಲ್ಲಿ ಇದ್ದಾರೆ. ಉಳಿದ ಶೇ.21 ರಷ್ಟು ಹಿಂದೂಗಳು ಮತಾಂತರಗೊಂಡಿದ್ದಾರೆ ಇಲ್ಲವೇ ಸಾವಪ್ಪಿದ್ದಾರೆ ಇಲ್ಲವೇ ದೇಶ ತೊರೆದಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಶೇ.9 ರಷ್ಟಿದ್ದ ಹಿಂದೂಗಳು ಈಗ ಶೇ.14ರಷ್ಟು ಏರಿದ್ದಾರೆ. ಹಾಗಾಗಿ ಈ ಕುರಿತು ನಾವು ಅಭಿಯಾನ ಮಾಡುತ್ತೇವೆ. ಇದು ಕೇವಲ ಬಿಜೆಪಿಯ ಕರ್ತವ್ಯವಲ್ಲ, ದೇಶವನ್ನು ಪ್ರೀತಿಸುವ ಪ್ರತಿಯೊಬ್ಬನ ಕರ್ತವ್ಯ ಎಂದರು.
ಕಾಂಗ್ರೆಸ್ನಲ್ಲಿ ಯಾರಾದರು ದೇಶ ಭಕ್ತರಿದ್ದರೆ ಪಕ್ಷವನ್ನು ಬಿಟ್ಟು ಹೊರಬನ್ನಿ. ಅದು ನಿಮಗೆ ಸೂಕ್ತ ವೇದಿಕೆ ಅಲ್ಲ. ತಾಲಿಬಾನಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಆರೋಪ ಮಾಡಿದ್ದಾರೆ.
ಹಾಗೆಯೇ ಇಲ್ಲೇ ಹುಟ್ಟಿ ಬೆಳೆದ ಮುಸಲ್ಮಾನರಿಗೆ ಈ ಕಾಯ್ದೆಯಿಂದಾಗಿ ಯಾವುದೇ ತೊಂದರೆ ಇಲ್ಲ. ನಮ್ಮಂತೆ ಅವರು ಕೂಡಾ ಭಾರತೀಯರು. ಆದರೆ ಬಾಂಗ್ಲಾದೇಶ, ಪಾಕಿಸ್ತಾನದಿಂದ ಮುಸ್ಲಿಮರು ನಿರಾಶ್ರಿತರಲ್ಲ. ಅವರು ಅಕ್ರಮ ನುಸುಳುಕೋರರು. ಅವರು ಇಲ್ಲಿನ ಸಂಪತ್ತಿನ ಆಸೆಯಿಂದಾಗಿ ಬಂದವರು. ಅಂಥವರಿಗೆ ಯಾಕೆ ನಾವು ಪೌರತ್ವ ನೀಡಬೇಕು? ನಿರಾಶ್ರಿತರನ್ನು ಹಾಗೂ ನುಸುಳುಕೋರರನ್ನು ಒಂದೇ ದೃಷ್ಟಿಯಿಂದ ನೋಡುವುದು ದೇಶದ ಭದ್ರತೆಯ ದೃಷ್ಟಿಯಲ್ಲಿ ಅಪಾಯಕಾರಿ ಎಂದರು.