ನವದೆಹಲಿ, ಡಿ 16 (Daijiworld News/MB) : ಉನ್ನಾವೋದಲ್ಲಿ 2017ರಲ್ಲಿ ನಡೆಸಿದ ಅಪ್ರಾಪ್ತೆ ಬಾಲಕಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ದೋಷಿ ಎಂದು ಸಾಬೀತುಪಡಿಸಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಇನ್ನೋರ್ವ ಆರೋಪಿ ಶಶಿ ಸಿಂಗ್ ಅವರನ್ನು ನಿರ್ದೋಷಿ ಎಂದು ನ್ಯಾಯಾಲಯ ಪರಿಗಣಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಯ ಪ್ರಮಾಣ ಕುರಿತ ವಿಚಾರಣೆಯನ್ನು ಡಿಸೆಂಬರ್ 19 ರಂದು ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಗೌಪ್ಯ ವಿಚಾರಣೆ ಪ್ರಕ್ರಿಯೆ ಈ ತಿಂಗಳ ಆರಂಭದಿಂದಲೂ ನಡೆದಿದ್ದು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಇಂದು ತೀರ್ಪು ಪ್ರಕಟ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗೊಗೊಯ್ ಅವರಿಗೆ ಅತ್ಯಾಚಾರ ಸಂತ್ರಸ್ಥೆ ಪತ್ರ ಬರೆದ ಬಳಿಕ ಈ ಪ್ರಕರಣ ಲಖನೌನಿಂದ ರಾಷ್ಟ್ರ ರಾಜಧಾನಿಗೆ ವರ್ಗಾವಣೆಗೊಂಡಿದ್ದು ಪ್ರತಿದಿನ ವಿಚಾರಣೆ ನಡೆಸುವಂತೆ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ವಿಚಾರಣೆಯನ್ನು ಪ್ರತಿದಿನ ನಡೆಸಬೇಕು ಹಾಗೂ 45 ದಿನಗಳೊಳಗೆ ವಿಚಾರಣೆ ಪೂರ್ಣವಾಗಬೇಕು ಎಂದು ದೆಹಲಿ ನ್ಯಾಯಾಲಯಕ್ಕೆ ಸೂಚಿಸಿತ್ತು.
ಉತ್ತರ ಪ್ರದೇಶದ ಬಂಗೆರ್ ಮಾವುನಿಂದ ನಾಲ್ಕು ಬಾರಿ ಬಿಜೆಪಿಯ ಶಾಸಕರಾಗಿದ್ದ ಕುಲದೀಪ್ ಸೆಂಗರ್ 2017ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ ಎದುರಿಸಿದ್ದು 2019 ಆಗಸ್ಟ್ ತಿಂಗಳಲ್ಲಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಬಿಜೆಪಿ ಉಚ್ಚಾಟಿತ ಶಾಸಕ ಸೆಂಗರ್ ಹಾಗೂ ಶಶಿ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ ( ಅಪರಾಧದ ಸಂಚು) 363 ( ಅಪಹರಣ) 376 ( ಅತ್ಯಾಚಾರ ) ಮತ್ತಿತರ ಪೊಕ್ಸೊ ಕಾಯ್ದೆಯಡಿಯ ಸೆಕ್ಷನ್ ಅಡಿಯಲ್ಲಿ ಆಗಸ್ಟ್ 9 ರಂದು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಕೆ ಸಲ್ಲಿಸಲಾಗಿತ್ತು.