ಅಮರಾವತಿ,ಡಿ 16 (Daijiworld News/PY) : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಇಂತಹ ಪ್ರಕರಣಗಳ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿ ದಿಶಾ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರ ಬೆನ್ನಲ್ಲೆ ದೆಹಲಿ ಸರ್ಕಾರವು ದಿಶಾ ಕಾಯ್ದೆಯನ್ನು ರಾಜ್ಯದೆಲ್ಲೆಡೆ ಜಾರಿಗೊಳಿಸಲು ಒಲವು ತೋರಿದೆ. ಆದರೆ ಕರ್ನಾಟಕದಲ್ಲಿ ಯಾವಾಗ ಎಂದು ಮಹಿಳಾ ಪರ ಸಂಘಟನೆಗಳೆಲ್ಲಾ ಪ್ರಶ್ನಿಸುತ್ತಿದ್ದಾರೆ.
"ಅತ್ಯಾಚಾರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಉದ್ದೇಶದಿಂದ ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಆಂಧ್ರಪ್ರದೇಶ ಅಪರಾಧ ಕಾನೂನು ದಿಶಾ ಕಾಯ್ದೆಯ ಕುರಿತು ದೆಹಲಿ ಸರ್ಕಾರವು ಒಲವು ತೋರಿಸಿದೆ" ಎಂದು ಆಂಧ್ರಪ್ರದೇಶದ ಸಂಸತ್ತಿನ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ತಿಳಿಸಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶ ಅಪರಾಧ ಕಾನೂನು ದಿಶಾ ಕಾಯ್ದೆಯ 2 ಮಸೂದೆಗಳನ್ನು ಅಂಗೀಕರಿಸಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾದ 21 ದಿನಗಳಲ್ಲಿಯೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಾಯ್ದೆಯಲ್ಲಿ ಹೇಳಲಾಗಿದೆ. ಘಟನೆ ನಡೆದ 7 ದಿನಗಳಲ್ಲಿ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಬೇಕು. 14 ದಿನಗಳಲ್ಲಿ ಆರೋಪಿಗಳ ವಿಚಾರಣೆಗಳನ್ನು ಮುಗಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದೆ.
ಇತ್ತೀಚೆಗೆ ಪಶುವೈದ್ಯೆ ಮೇಲೆ ಕಾಮುಕರು ನಡೆಸಿದ ದುಷ್ಕ್ರತ್ಯಕ್ಕೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.