ಕೋಲ್ಕತ್ತಾ, ಡಿ 16 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಕಾಯ್ದೆ ವಿರುದ್ಧ ತೊಡೆ ತಟ್ಟಿನಿಂತಿದ್ದಾರೆ.
ಕಾಯ್ದೆ ವಿರುದ್ಧ ಸೋಮವಾರದಂದು ಪಶ್ಚಿಮ ಬಂಗಾಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಗುಡುಗಿರುವ ಅವರು, ನನ್ನ ಸರಕಾರವನ್ನು ಬೇಕಾದರೆ ನೀವು ವಜಾಗೊಳಿಸಿ. ಆದರೆ, ನಾನು ಮಾತ್ರ ಪೌರತ್ವ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದಾರೆ.
ಇನ್ನು ಸೋಮವಾರ ಟಿಎಂಸಿ ಕಾರ್ಯಕರ್ತರು ನಡೆಸಿದ ರ್ಯಾಲಿಯಲ್ಲಿ ಪೌರತ್ವ ಕಾಯ್ದೆಯಿಂದ ಸಂತ್ರಸ್ತರಾಗುವ ಜನರು ಭಾಗವಹಿಸಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಹಿಂಪಡೆಯುವ ತನಕ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಕಿಡಿ ಖಾರಿದರು. ಅಲ್ಲದೆ ಮೋದಿ ಸರಕಾರದ ವಿರುದ್ಧ ಗುಡುಗಿದ ಅವರು, ನೀವು ನಿಮ್ಮ ಅಧಿಕಾರ ಬಲವನ್ನು ಬಳಸಿಕೊಂಡು ನನ್ನ ಸರಕಾರವನ್ನು ಬೇಕಾದರೆ ವಜಾಗೊಳಿಸಿ. ಯಾವುದೇ ನಿರ್ಧಾರಕ್ಕೂ ನಾವು ಜಗ್ಗುವುದಿಲ್ಲ. ಕಾಯ್ದೆ ಜಾರಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದರು.
ಇನ್ನು ರೈಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಿಂಸಾಚಾರಕ್ಕೆ ಬಿಜೆಪಿಯೇ ನೇರ ಹೊಣೆ. ಕೆಲವು ದುಷ್ಕರ್ಮಿಗಳು ಕೇಸರಿ ಪಕ್ಷದಿಂದ ಹಣ ಪಡೆದು ಹಿಂಸಾಚಾರ ಕೃತ್ಯ ಎಸಗುತ್ತಿದ್ದಾರೆ. ಇದಕ್ಕಾಗಿ ಕೆಲವು ಶಕ್ತಿಗಳು ಹೊರಗಿನಿಂದ ಬಂದಿದ್ದು, ಅವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಎಂತಹ ಪರಿಸ್ಥಿತಿ ಎದುರಾದರೂ ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ಬ್ಯಾನರ್ಜಿ ಪ್ರತಿಜ್ಞಾ ವಿಧಿ ಬೋಧಿಸಿದರು.