ನವದೆಹಲಿ, ಡಿ 17 (Daijiworld News/MB) : ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರವಾನೆ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಧಿಕಾರವಧಿ ಇದೇ ತಿಂಗಳ 31ರಂದು ಕೊನೆಗಳ್ಳಲಿದ್ದು ಲೆ.ಜ.ನಾರವಾನೆ ಭಾರತೀಯ ಸೇನೆಯ 28ನೇ ಮುಖ್ಯಸ್ಥರಾಗಿ ನೇಮಿಸಲು ಸರಕಾರ ನಿರ್ಧಾರ ಕೈಗೊಂಡಿದೆ.
ಲೆ.ಜ.ನಾರವಾನೆ ಪ್ರಸ್ತುತ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು ಸೇವಾ ಹಿರಿತನದ ಆಧಾರದ ಮೇಲೆ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಇವರು ಕಳೆದ ಸೆಪ್ಟೆಂಬರ್ 1ರಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಇದಕ್ಕೂ ಮುನ್ನ ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದರು.
ಲೆ.ಜ. ನಾರವಾನೆ ಅವರು ರಾಷ್ಟ್ರೀಯ ರಕ್ಷಣಾ ಶೈಕ್ಷಣಿಕ ಸಂಸ್ಥೆ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ವಿದ್ಯಾರ್ಥಿಯಾಗಿದ್ದರು. ಸಿಖ್ ಲೈಟ್ ಇನ್ಫಾಂಟ್ರಿ ರೆಜಿಮೆಂಟ್ 7ನೇ ಬೆಟಾಲಿಯನ್ ಮೂಲಕ 1980ರ ಜೂನ್ ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು.