ನವದೆಹಲಿ, ಡಿ 17 (Daijiworld News/PY) : ರಾಷ್ಟ್ರ ರಾಜಧಾನಿಯಾದ ದೆಹಲಿಯನ್ನು ಬೆಚ್ಚಿ ಬೀಳಿಸಿದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.
ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆ ನಡೆಸಲಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಪಟ್ಟಿದ್ದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದ್ದು, ತೀರ್ಪು ಪರಿಶೀಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
ಇತ್ತಿಚೆಗೆ ನಡೆದ ದಿಶಾ ಅತ್ಯಾಚಾರದ ಪ್ರಕರಣದ ಅತ್ಯಾಚಾರಿಗಳನ್ನು ಎನ್ ಕೌಂಟರ್ ಮಾಡಿದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ಬೆನ್ನಲ್ಲೆ ತಿಹಾರ್ ಜೈಲಿನ ಸಿಬ್ಬಂದಿ ಕೂಡಾ ಗಲ್ಲು ಶಿಕ್ಷೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ತಯಾರಿ ಹೊತ್ತಿನಲ್ಲೇ ಅಪರಾಧಿ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಈ ಹಿಂದೆಯಷ್ಟೇ ಸುಪ್ರೀಂಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಆದೇಶವನ್ನು ಪುನರ್ ಪರಿಶೀಲನೆ ಮಾಡುವಂತೆ ಪ್ರಕರಣದ ಮೂವರು ಅಪರಾಧಿಗಳಾದ ಮುಖೇಶ್, ಪವನ್ ಕುಮಾರ್ ಗುಪ್ತಾ ಹಾಗೂ ವಿನಯ್ ಶರ್ಮಾ ನೀಡಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಈ ಪ್ರಕರಣಗಳ ವಿಚಾರಣೆ ಬಾಕಿ ಇರುವ ಹಿನ್ನಲೆಯಲ್ಲಿ ಡಿಸೆಂಬರ್ 18ಕ್ಕೆ ವಿಚಾರಣೆಯನ್ನು ನಡೆಸುವಾದಾಗಿ ಹೆಚ್ಚುವರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ತಿಳಿಸಿದ್ದರು. ಅಲ್ಲದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈಗಾಗಲೇ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದು ಇದರ ಬೆನ್ನಲ್ಲೇ ಅಕ್ಷಯ್ ಠಾಕೂರ್ ಸಲ್ಲಿಸಿದ ಕೊನೆಯ ಅರ್ಜಿ ಈಗ ಮಹತ್ವ ಪಡೆದುಕೊಂಡಿದೆ.
ಅಲ್ಲದೇ ಅರ್ಜಿದಾರರ ಕಾನೂನು ಹೋರಾಟದ ಅವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಂತೆ ಈಚೆ ಸಂತ್ರಸ್ಥೆಯ ತಾಯಿ ಆಶಾದೇವಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ತಕ್ಷಣವೇ ಅಪರಾಧಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಅಕ್ಷಯ್ ಠಾಕೂರ್ ನೀಡಿರುವ ಅರ್ಜಿಯನ್ನು ಇಂದು ಸವೋಚ್ಛ ನ್ಯಾಯಾಲಯವು ಪರಿಗಣಿಸುತ್ತಾ ಅಥವಾ ತಿರಸ್ಕರಿಸುತ್ತಾ ಎಂಬ ಮಹತ್ವದ ನಿರ್ಧಾರವು ಇಂದು ಮಧ್ಯಾಹ್ನ ತಿಳಿಯಲಿದೆ.