ಬೆಂಗಳೂರು, ಡಿ 17(Daijiworld News/MSP): ನಾಲ್ಕು ವರ್ಷದ ಮಗು ಮೇಲೆ ಶಾಲಾ ವಾಹನ ಹರಿದು ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತ ಬಾಲಕನನ್ನು ಕಮ್ಮಸಂದ್ರ ಬಳಿಯ ನಂತನಗರದ ಮನು ಮತ್ತು ಸುನಿತಾ ದಂಪತಿಗಳ ಪುತ್ರ ದೀಕ್ಷಿತ್ (4) ಎಂದು ಗುರುತಿಸಲಾಗಿದೆ. ಕಮ್ಮಸಂದ್ರದ ಸೇಂಟ್ ಪೀಟರ್ ಶಾಲೆಯಲ್ಲಿ ಎಲ್ಕೆಜಿ ಓದುತ್ತಿದ್ದ ದೀಕ್ಷಿತ್ ಸ್ಕೂಲ್ ಗೆ ಸಂಬಂಧಿಸಿದ ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದ . ಸೋಮವಾರ ಮಧ್ಯಾಹ ಮನೆಗೆಂದು ಸ್ಕೂಲ್ ಬಸ್ಸಿನಿಂದ ಇಳಿದ ತಕ್ಷಣ ಬಸ್ ಮುಂದಕ್ಕೆ ಚಲಿಸಿ ಬಾಲಕನ ಮೇಲೆ ಹರಿದಿದೆ. ಇದರಿಂದ ಬಾಲಕ ದಾರುಣವಾಗಿ ಸಾವನ್ನಪ್ಪಿದ್ದ. ಬಾಲಕನ ಸಾವಿಗೆ ಕಾರಣನಾದ ಬಸ್ ಚಾಲಕ ಚನ್ನಪ್ಪನ್ನು ಸ್ಥಳೀಯರು ಹಿಡಿದು ಹೆಬ್ಬಗೋಡಿ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ.
ಚಾಲಕ ಹಾಗೂ ಶಾಲೆಯ ನಿರ್ಲಕ್ಷ್ಯದ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ತನಿಖೆ ವೇಳೆ ಬಸ್ಸಿನಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಇಳಿಸಲು ಇರಬೇಕಾದ ಸಹಾಯಕಿ ಇರಲಿಲ್ಲ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ದೀಕ್ಷಿತ್ ಬಸ್ಸಿನಿಂದ ಇಳಿದು ಯಾವ ದಿಕ್ಕಿಗೆ ಹೋಗುತ್ತಿದ್ದಾನೆ ಎನ್ನುವುದು ಚಾಲಕನಿಗೆ ಅರಿವಿಗೆ ಬಂದಿರಲಿಲ್ಲ. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.