ಮುಂಬೈ, ಡಿ 17(Daijiworld News/MSP): ಕೆಲಸಕ್ಕೆ ತೆರಳಲೆಂದು ಕಿಕ್ಕಿರಿದ ರೈಲು ಏರಿದ ಯುವತಿಯೋರ್ವಳು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಮುಂಬೈನ ದೊಂಬಿವಿಲಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ದೊಂಬಿವಿಲಿ ನಿವಾಸಿ 22ರ ಹರೆಯದ ಚಾರ್ಮಿ ಪ್ರಸಾದ್ ಎಂದು ಗುರುತಿಸಲಾಗಿದೆ.ದೊಂಬಿವಿಲಿ ಮತ್ತು ಕೋಪರ್ ರೈಲ್ವೇ ನಿಲ್ದಾಣಗಳಲ್ಲಿ ನಡುವೆ ಸೋಮವಾರ ಈ ಘಟನೆ ನಡೆದಿದ್ದು ರೈಲು ಕಂಪಾರ್ಟ್ಮೆಂಟ್ನಲ್ಲಿ ಕಿಕ್ಕಿರಿದ ಜನವಿದ್ದ ಕಾರಣ ಫುಟ್ಬೋರ್ಡ್ನಲ್ಲಿ ಪ್ರಯಾಣಿಸುತ್ತಿದ್ದ ಚಾರ್ಮಿ ಪ್ರಸಾದ್ ಸಮತೋಲನವನ್ನು ಕಳೆದುಕೊಂಡಿ ಬಿದ್ದಿದ್ದು, ತಲೆಗೆ ಮತ್ತು ಬೆನ್ನಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಶಾಸ್ತ್ರೀ ನಗರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಪ್ರಸಕ್ತ ವರ್ಷದಲ್ಲಿ ನಡೆದ ನಾಲ್ಕನೇ ದುರ್ಘಟನೆ ಇದಾಗಿದೆ ಎಂದು ವರದಿಯಾಗಿದೆ. "ಚಾರ್ಮಿ ದಿನನಿತ್ಯ ಕೆಲಸಕ್ಕೆಂದು ರೈಲಿನಲ್ಲಿ ಓಡಾಡುತ್ತಿದ್ದು ಸೋಮವಾರವೂ ಕಚೇರಿಗೆ ತೆರಳುತ್ತಿದ್ದರು. ಖಾಸಗಿ ಕಂಪನಿಯ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು" ಎಂದು ಚಾರ್ಮಿ ಸಹೋದರ ಮೆಹುಲ್ ಪ್ರಸಾದ್ ಹೇಳಿದ್ದಾರೆ.
ಜನಸಂದಣಿಯಿಂದ ಕೂಡಿರುವ ಸ್ಥಳೀಯ ರೈಲುಗಳನ್ನು ಹತ್ತುವುದು ತುಂಬಾ ಕಷ್ಟ ಮತ್ತು ಆದರೆ ಶಾಲಾ ಕಾಲೇಜಿಗೆ, ಕೆಲಸಕ್ಕೆ, ಸಮಯಕ್ಕೆ ಸರಿಯಾಗಿ ತಲುಪಬೇಕಾದ ಅನಿವಾರ್ಯವಿರುವುದರಿಂದ ಪ್ರಯಾಣಿಕರಿಗೆ ಅನಿವಾರ್ಯ ಫುಟ್ಬೋರ್ಡ್ನಲ್ಲಿ ನಿಂತು ಪ್ರಯಾಣಿಸಬೇಕಾಗುತ್ತದೆ. ರೈಲುಗಳಲ್ಲಿ ಅತಿಯಾದ ಜನರು ಪ್ರಯಾಣಿಸುತ್ತಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.