ನವದೆಹಲಿ, ಡಿ 17 (Daijiworld News/MB) : ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಆದರೆ ಬಂಧಿತ ಆರೋಪಿಗಳು ಯಾರು ಕೂಡಾ ವಿದ್ಯಾರ್ಥಿಗಳಲ್ಲ.
ಪೊಲೀಸರು ಈ ವಿಶ್ವವಿದ್ಯಾನಿಲಯದ ಯಾವುದೇ ವಿದ್ಯಾರ್ಥಿಗಳನ್ನು ಬಂಧಿಸಿಲ್ಲ ಹಾಗೆಯೇ ಕ್ಲೀನ್ ಚೀಟಿ ಕೂಡಾ ನೀಡಿಲ್ಲ. ಬದಲಾಗಿ ವಿಶ್ವವಿದ್ಯಾನಿಲಯದ ಅಜುಬಾಜಿನ ಜಾಮಿಯಾ ಹಾಗೂ ಒಕ್ಲಾ ಪ್ರದೇಶದವರು ಬಂಧಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಭಾನುವಾರ ಈ ವಿಶ್ವವಿದ್ಯಾನಿಲಯದಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಈ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭ 3 ಸರ್ಕಾರಿ ಬಸ್ ಗಳು, ಟ್ರಕ್ ವೊಂದಕ್ಕೆ ಬೆಂಕಿ ಹಚ್ಚಲಾಗಿತ್ತು.
ಪೊಲೀಸರು ವಿಶ್ವವಿದ್ಯಾನಿಲಯದ ಅನುಮತಿ ಪಡೆಯದೆಯೇ ವಿಶ್ವವಿದ್ಯಾನಿಲಯದ ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳಿಗೆ ಲಾಟಿಚಾರ್ಚ್ ಮಾಡಿ ಅವರನ್ನು 100 ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಈ ಹಿನ್ನಲೆಯಲ್ಲಿ ಜಾಮಿಯಾ, ದೆಹಲಿ ವಿಶ್ವವಿದ್ಯಾನಿಲಯ ಹಾಗೂ ಜೆಎನ್ ಯು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪೊಲೀಸರ ಈ ಹಿಂಸಾಚಾರವನ್ನು ಖಂಡಿಸಿ ದೆಹಲಿ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ನಂತರ ಸೋಮವಾರ ಮಧ್ಯಾಹ್ನ ಬಂಧಿಸಲಾಗಿದ್ದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಕೆಲವರ ಪಿತೂರಿಯಿಂದಾಗಿ ಹಿಂಸಾಚಾರಕ್ಕೆ ತಿರುಗಿದೆ. ಇದರ ಹಿಂದೆ ಷಡ್ಯಂತ್ರ ಇದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ಕುರಿತು ಜಾಮಿಯಾ ಕುಲಪತಿ ನಜ್ಮಾ ಅಖ್ತಾ, ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕೆಲ ಸ್ಥಳೀಯರೇ ಕಾರಣ. ಸಾರ್ವಜನಿಕ ಗುಂಪು ಕೂಡಾ ಈ ಪ್ರತಿಭಟನೆಯಲ್ಲಿ ಭಾಗವಹಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.