ನವದೆಹಲಿ, ಡಿ 17 (Daijiworld News/MB) : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನರೇಂದ್ರ ಮೋದಿಯ ಬಿಜೆಪಿ ಸರಕಾರ ದೇಶದ ಜನರ ಮೇಲೆ ಯುದ್ಧ ಘೋಷಣೆ ಮಾಡಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅದಕ್ಕೆ ತಿರುಗೇಟು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ "ರಾಜಕೀಯ ಲಾಭಕ್ಕಾಗಿ ಸೋನಿಯಾ ಗಾಂಧಿ ವಿದ್ಯಾರ್ಥಿಗಳ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಾರೆ" ಎಂದು ಹೇಳಿದ್ದಾರೆ.
"ಸೋನಿಯಾ ಗಾಂಧಿಯವರ ಹೇಳಿಕೆ ರಾಜಕೀಯ ಲಾಭದ ಉದ್ದೇಶದಿಂದ ಕೂಡಿದೆ. ಹಾಗೆಯೇ ಇದು ಬೇಜವಾಬ್ದಾರಿ ಹೇಳಿಕೆಯಾಗಿದೆ. ಅವರ ಈ ಹೇಳಿಕೆ ದೇಶಾದ್ಯಂತ ಅಶಾಂತಿಯನ್ನು ಹರಡುವಂತದ್ದು. ವಿರೋಧ ಪಕ್ಷದಲ್ಲಿ ಇರುವ ಅವರು ದೇಶದಲ್ಲಿ ಶಾಂತಿ ಮತ್ತು ಸೌಹಾರ್ಧವನ್ನು ಕಾಪಾಡಲು ಮಂದಾಗಬೇಕು. ಆದರೆ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಉಭಯ ಸದನಗಳು ಕೂಡ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕಾರ ಮಾಡಿದೆ ಎಂಬುದನ್ನು ಕಾಂಗ್ರೆಸ್ ನೆನಪಿನಲ್ಲಿಡಬೇಕು" ಎಂದು ತಿಳಿಸಿದ್ದಾರೆ.
ದೇಶಾದ್ಯಂತ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತಾನಾಡಿದ ಸೋನಿಯಾ ಗಾಂಧಿ "ಬಿಜೆಪಿ ಸರಕಾರವು ಕೋಮು ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಮೂಲಕ ತನ್ನ ಆಡಳಿತ ವೈಫಲ್ವವನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ. ಅಷ್ಟು ಮಾತ್ರವಲ್ಲದೇ ಯುವಜನರನ್ನು ಹಾಗೂ ವಿದ್ಯಾರ್ಥಿಗಳನ್ನು ನಿಯಂತ್ರಣ ಮಾಡುತ್ತಿದೆ. ಮೋದಿ ಸರಕಾರದ ಅಂತ್ಯ ಆರಂಭವಾಗಿದೆ" ಎಂದು ಹೇಳಿದ್ದರು.