ಮುಂಬೈ, ಡಿ 17 (Daijiworld News/PY) : ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ತೀರ್ಪು ಬಂತಾದರೂ ಈ ಪಕ್ಷಗಳ ಕಚ್ಚಾಟ ಮಾತ್ರ ಇನ್ನೂ ಕೊನೆಗೊಂಡಿಲ್ಲ.
ವಿಶ್ವದಲ್ಲಿರುವ ಭಾರತೀಯರ ನಿರೀಕ್ಷೆಯಂತೆ ಇನ್ನು ನಾಲ್ಕು ತಿಂಗಳುಗಳ ಒಳಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆ ಬೆನ್ನಲ್ಲೇ ಸಂಜಯ್ ರಾವತ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದೇ ಶಿವಸೇನೆ, ಹಾಗಿದ್ದಲ್ಲಿ ಮಂದಿರ ನಿರ್ಮಾಣದ ಕ್ರೆಡಿಟ್ ಯಾವುದೇ ಒಂದು ಪಕ್ಷಕ್ಕೆ ಹೋಗಬಾರದು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರ ಹೇಳಿಕೆಗೆ ಕುರಿತಂತೆ ಮಹಾರಾಷ್ಟ್ರ ವಿಧಾನ ಭವನ್ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ರಾವತ್, "ಅಮಿತ್ ಶಾ ಹೇಳಿರುವ ಮಾತು ನಿಜ. ರಾಮ ಮಂದಿರ ಖಂಡಿತವಾಗಿಯೂ ನಿರ್ಮಾಣವಾಗಲಿದೆ. ಆದರೆ ರಾಮ ಮಂದಿರದ ನಿರ್ಮಾಣಕ್ಕೆ ಮಾತ್ರ ಮೊದಲು ಅಡಿಪಾಯ ಹಾಕಿದ್ದೇ ಶಿವಸೇನೆ" ಎಂದು ಹೇಳಿದರು.
ಬಳಿಕ ರಾಮ ಮಂದಿರ ನಿರ್ಮಾಣದ ಕ್ರೆಡಿಟ್ ಒಂದು ವೇಳೆ ಬಿಜೆಪಿ ಪಕ್ಷಕ್ಕೆ ಹೋದರೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, "ರಾಮ ಮಂದಿರ ನಿರ್ಮಾಣದ ಕ್ರೆಡಿಟ್ ಕೇವಲ ಒಂದು ಪಕ್ಷಕ್ಕೆ ಮೀಸಲಾಗದೇ, ವಿ ಎಚ್ ಪಿ, ಸಾಧು -ಸಂತರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕೋಟ್ಯಾಂತರ, ಲಕ್ಷಾಂತರ ಕರಸೇವಕರಿಗೆ ಸಲ್ಲಬೇಕು" ಎಂದು ಹೇಳಿದರು.