ರಾಂಚಿ, ಡಿ 17 (Daijiworld News/PY) : "ಪೌರತ್ವ ಮಸೂದೆ ಕಾಯ್ದೆ ವಿರೋಧಿಸುವ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿಗೆ ನನ್ನದೊಂದು ಸವಾಲಿದೆ, ನಿಮಗೆ ತಾಕತ್ತಿದ್ದರೆ ಪಾಕಿಸ್ತಾನದ ಎಲ್ಲಾ ನಾಗರಿಕರಿಗೂ ಭಾರತದ ಪೌರತ್ವ ನೀಡುತ್ತೇವೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೊಳಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿ" ಎಂದು ಪ್ರಧಾನಿ ಮೋದಿ ಸವಾಲು ಹಾಕಿದ್ದರೆ.
ಜಾರ್ಖಂಡ್ ನ ಭೋಗ್ನಾಡಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಪೌರತ್ವ ಮಸೂದೆಯೂ ಭಾರತದ ಯಾವುದೇ ನಾಗರಿಕನ ಪೌರತ್ವದ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಾತ್ರ ಕೇವಲ ರಾಜಕೀಯ ಉದ್ದೇಶಗಳಿಗಾಗಿ ಮುಸ್ಲಿಮರನ್ನು ಪ್ರಚೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ನಾಗರಿಕತ್ವ ನೀಡುವ ಸಲುವಾಗಿ ಜಾರಿಗೆ ಬಂದ ಪೌರತ್ವ ಕಾಯ್ದೆಯ ಬಗ್ಗೆ ಸುಳ್ಳು ಸಂದೇಶಗಳನ್ನು ಪಸರಿಸುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದಲ್ಲಿರುವ ಮುಸ್ಲಿಮರಲ್ಲಿ ಭಯ ಹುಟ್ಟುಹಾಕಲು ಹೊರಟಿದೆ. ಈ ಕಾಯ್ದೆ ದೇಶದಲ್ಲಿರುವ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂದು ಅಶ್ವಾಸನೆ ನೀಡಿದರು.
"ಯುವಕರೇ ವಿದ್ಯಾರ್ಥಿಗಳೇ ನಾನು ನಿಮ್ಮ ಮಾತುಗಳನ್ನು ಕೇಳುತ್ತೇನೆ, ಭಾರತೀಯ ಸಂವಿಧಾನವು ನಮ್ಮ ಏಕೈಕ ಪವಿತ್ರವಾಗಿರುವ ಪುಸ್ತಕವಾಗಿದೆ. ನಿಮ್ಮ ಪ್ರತಿಭಟನೆಗಳು ಏನೇ ಇದ್ದರೂ ಅದು ಪ್ರಜಾಪ್ರಭುತ್ವವಾಗಿ ಇರಲಿ" ಎಂದು ಹೇಳಿದ್ದಾರೆ.