ಬೆಂಗಳೂರು, ಡಿ 17 (DaijiworldNews/SM): ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿನ ಬಡವರ್ಗದ ಜನತೆಯ ಹಸಿವು ನೀಗಿಸಲೆಂದು ಜಾರಿಗೆ ತಂದಿದ್ದ ಮಹತ್ವಕಾಂಕ್ಷಿಯ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ನನ್ನು ಇದೀಗ ಬಿಜೆಪಿ ಸರಕಾರ ತಮ್ಮ ಅವಧಿಯಲ್ಲಿ ಕ್ಯಾಂಟೀನ್ ಹೆಸರು ಬದಲಾಯಿಸಲು ಸರಕಾರ ಮುಂದಾಗಿದೆ. ಇದು ಇದೀಗ ವಿವಾದಕ್ಕೆ ಕಾರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಕಡು ಬಡವರ ಹಸಿವು ನೀಗಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದರು. ಆ ಮೂಲಕ ಕಡುಬಡತನದಲ್ಲಿದ್ದವರಿಗೆ ಹಸಿವು ನೀಗಿಸುವ ಕಾರ್ಯಕ್ಕೆ ಸರಕಾರ ಮುಂದಡಿಯಿಟ್ಟಿದ್ದರು. ಇದೀಗ ಆಡಳಿತದಲ್ಲಿರುವ ಬಿಜೆಪಿ ಸರಕಾರ ಇಂದಿರಾ ಕ್ಯಾಂಟೀನ್ ಬದಲಾಯಿಸಿ "ಮಹರ್ಷಿ ವಾಲ್ಮೀಕಿ ಅನ್ನಕುಟೀರ" ಎಂದು ಮರು ನಾಮಕರಣಗೊಳಿಸಲು ಮುಂದಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ, "ಮಹರ್ಷಿ ವಾಲ್ಮೀಕಿ ಅನ್ನಕುಟೀರ" ಅಂತಾ ಮರುನಾಮಕರಣ ಮಾಡಲು ತೀರ್ಮಾನ ಮಾಡುತ್ತೇವೆ ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಘೋಷಿಸಿದ್ದು, ಅವರ ಹೇಳಿಕೆಯ ಬಳಿಕ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಮಾಜಿ ಸಚಿವ, ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಮನವಿ ಮಾಡಿ ಸೂಚಿಸಿದ್ದರು. ಅವರ ಮನವಿ ಪುರಸ್ಕರಿಸುವುದು ಅತ್ಯಂತ ಸೂಕ್ತ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಆರ್. ಅಶೋಕ್ ವಿಧಾನಸೌಧದಲ್ಲಿ ಮಾಹಿತಿ ಕೊಟ್ಟಿದ್ದಾರೆ.