ನವದೆಹಲಿ, ಡಿ 18 (Daijiworld News/MB) : ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ನಡೆಸಿದಾಗ ಅದು ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ವಿಶ್ವ ವಿದ್ಯಾನಿಲಯದ ಆವರಣಕ್ಕೆ ನುಗ್ಗಿ ಲಾಠಿ ಚಾರ್ಚ್ ನಡೆಸಿದ ಬೆನ್ನಲ್ಲೇ ದೆಹಲಿಯಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿದ್ದು ಈ ಹಿನ್ನಲೆಯಲ್ಲಿ ಪೊಲೀಸರು ಒಟ್ಟು 7 ಜನರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಆ ಪೈಕಿ ಕಾಂಗ್ರೆಸ್ ನ ಮಾಜಿ ಶಾಸಕ ಆಸಿಫ್ ಖಾನ್ನ ಮೇಲೆ ಕೂಡಾ ಎಫ್ ಐಆರ್ ದಾಖಲಿಸಲಾಗಿದೆ.
ಪೊಲೀಸರು ಒಟ್ಟು ೭ ಜನರನ್ನು ಆರೋಪಿಗಳು ಎಂದು ನಮೂದಿಸಿದ್ದು , ಸ್ಥಳೀಯ ರಾಜಕಾರಣಿಗಳಾದ ಆಶು ಖಾನ್, ಮುಸ್ತಾಫಾ ಮತ್ತು ಹೈದರ್, ಎಐಎಸ್ಎ ಸದಸ್ಯ ಚಂದನ್ ಕುಮಾರ್, ಎಸ್ಐಒ ಸದಸ್ಯ ಆಸಿಫ್ ತನ್ಹಾ ಮತ್ತು ಸಿವೈಎಸ್ಎಸ್ ಸದಸ್ಯ ಕಾಸಿಮ್ ಉಸ್ಮೈನ್ ಹಾಗೂ ಅದರಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಆಸಿಫ್ ಖಾನ್ನ ಹೆಸರು ಕೂಡಾ ಇದೆ.
ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಲವಾರು ಪ್ರತಿಭಟನಾ ಮೆರವಣಿಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಆಸಿಫ್ ಮತ್ತು ಆಶು ಪ್ರತಿಭಟನಾಕಾರರನ್ನು ಪ್ರಚೋದಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಘೋಷಣೆ ಕೂಗುತ್ತಾ ಮಥುರಾ ರಸ್ತೆ ಕಡೆಗೆ ಮೆರವಣಿಗೆ ಬಂದಾಗ ಪ್ರತಿಭಟನೆ ಹಿಂಸಾರೂಪವನ್ನು ತಾಳಿದ್ದು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಬಸ್ಸುಗಳಿಗೆ ಬೆಂಕಿ ಹಚ್ಚುವುದು, ವಾಹನಗಳನ್ನು ಜಖಂಗೊಳಿಸುವುದು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿ ವಿಶ್ವವಿದ್ಯಾಲಯದ ಕಡೆಗೆ ಹೊರಟರು ಎಂದು ಪೊಲೀಸರು ಎಫ್ ಐಆರ್ ಬರೆದಿದ್ದಾರೆ.
ಶಾಂತಿ ಕಾಪಾಡಲು ಪೊಲೀಸರು ಎಷ್ಟೇ ಹೇಳಿದರೂ ಹಿಂಸಾಚಾರ ನಡೆಸಿ ವಿಶ್ವವಿದ್ಯಾಲಯ ಹತ್ತಿರವಿದ್ದ ಸಿಎಟಿ ಆಂಬ್ಯುಲೆನ್ಸ್ ನ್ನು ಧ್ವಂಸಗೊಳಿಸಿದರು. ಆ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು. ಆಗ ವಿಶ್ವವಿದ್ಯಾಲಯದ ಒಳಗೆ ಗೇಟ್ ಸಂಖ್ಯೆ 4,7 ಮತ್ತು 8 ಕಡೆಯಿಂದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಎಸೆಯುತ್ತಿದ್ದರು.
ಪ್ರತಿಭಟನೆ ತೀವ್ರ ರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಪೊಲೀಸರು ಕಡಿಮೆ ಸಿಬ್ಬಂದಿಯೊಂದಿಗೆ ವಿಶ್ವವಿದ್ಯಾಲಯ ಕ್ಯಾಂಪಸ್ ಒಳಗೆ ಹೋಗಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಹೊರಗೆ ಕರೆಸಿದ್ದು ಈ ಸಂದರ್ಭದಲ್ಲಿ ಹಲವು ಪೊಲೀಸರಿಗೆ ಗಂಭೀರ ಗಾಯವಾಗಿದೆ.
ಟಿಕೋನಾ ಪಾರ್ಕ್ ಮತ್ತು ಜಾಕಿರ್ ನಗರ ಧಲನ್ ಪೊಲೀಸ್ ಬೂತ್ಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದು ಸುಮಾರು 70ರಿಂದ 80 ಮೋಟಾರು ಬೈಕ್ ಗಳನ್ನು ಸಹ ಧ್ವಂಸ ಮಾಡಲಾಗಿದೆ ಎಂದು ಎಫ್ಐಆರ್ ನಲ್ಲಿ ಪೊಲೀಸರು ನಮೂದಿಸಿದ್ದಾರೆ.