ಬೆಂಗಳೂರು, ಡಿ 18 (Daijiworld News/MB) : ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು, ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶಾನಲಯ ಸಮನ್ಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
"ಜಾರಿ ನಿರ್ದೇಶನಾಲಯ ಹಾಗೂ ತೆರಿಗೆ ಇಲಾಖೆಯ ಅಧಿಕಾರಿಗಳು ನನ್ನ ಹಾಗೂ ನಮ್ಮ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿದ್ದು ಈ ಹಿನ್ನಲೆಯಲ್ಲಿ 2019ರ ಅ.9ರಂದು ನನ್ನ ವಿರುದ್ಧ ಜಾರಿಗೊಳಿಸಿರುವ ಸಮನ್ಸ್'ನ್ನು ರದ್ದುಗೊಳಿಸಲು ಆದೇಶ ನೀಡಬೇಕೆಂದು" ಗೌರಮ್ಮ ಅವರು ಅರ್ಜಿ ಮೂಲಕ ಮನವಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆಯು ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆದಿದ್ದು, "ಗೌರಮ್ಮ ಅವರು 85 ವರ್ಷದ ವೃದ್ದೆಯಾಗಿದ್ದು, ತನಿಖೆಗಾಗಿ ನವದೆಹಲಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಅವರ ಮನೆಯಲ್ಲಿಯೇ ಅವರ ಹೇಳಿಕೆಯನ್ನು ದಾಖಲು ಮಾಡಲು ಸಾಧ್ಯವೇ ಎಂಬುದರ ಕುರಿತು ಬುಧವಾರದೊಳಗಾಗಿ ಸ್ಪಷ್ಟನೆ ನೀಡುವಂತೆ ಜಾರಿ ನಿರ್ದೇಶನಾಲಯದ ಸಲಹೆಗಾರರಿಗೆ ಸೂಚಿಸಿದೆ. ಹಾಗೆಯೇ ವಿಚಾರಣೆಯನ್ನು ಮುಂದೂಡಿದೆ.