ಬೆಂಗಳೂರು, ಡಿ 18 (Daijiworld News/PY) : ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ಬಿಯರ್ ಕುಡಿಯುವವರ ಸಂಖ್ಯೆಯು ಇಳಿಕೆಯಾಗುತ್ತಿದ್ದು, ಈ ವಿಷಯವನ್ನು ತೀವ್ರವಾಗಿ ಪರಿಗಣಿಸಿದ ಅಬಕಾರಿ ಇಲಾಖೆಯು ಇದೀಗ ತನಿಖೆಗೆ ಆದೇಶ ಹೊರಡಿಸಿದೆ.
ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬಿಯರ್ ಮಾರಾಟದ ಪ್ರಮಾಣವು ಕಡಿಮೆಯಾಗುತ್ತಿದೆ. ಆದರೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬಿಯರ್ ಮಾರಾಟ ಏರಿಕೆಯಾಗುತ್ತಲೇ ಇತ್ತು. ಈ ವರ್ಷ ಬಿಯರ್ ಮಾರಾಟದ ಪ್ರಮಾಣವು ಕಡಿಮೆಯಾಗಿದ್ದು ಇಲಾಖೆಗೆ ತಲೆನೋವು ತರಿಸಿದೆ. ಆದ್ದರಿಂದ ಈ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲ ಅಬಕಾರಿ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ಅಬಕಾರಿ ಆಯುಕ್ತರು ಆದೇಶ ನೀಡಿದ್ದಾರೆ.
ಬಿಯರ್ ಮಾರಾಟದ ಪ್ರಮಾಣ ಮತ್ತು ಅದರ ಶೇಕಡಾವಾರು ಬೆಳವಣಿಗೆ ಇಳಿಮುಖ ಕಂಡಿದೆ. ಈ ವಿಷಯವನ್ನು ಅತ್ಯಂತ ತೀವ್ರವಾಗಿ ಪರಿಗಣಿಸಿದ ಅಬಕಾರಿ ಇಲಾಖೆಯು ಮಾರಾಟ ಕುಗ್ಗುತ್ತಿರುವುದಕ್ಕೆ ಕಾರಣ ಹುಡುಕುವ ಸಲುವಾಗಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಗೆ ತಿಳಿಸಿದೆ.
ಈ ವಿಷಯದ ಬಗ್ಗೆ ಮಾತನಾಡಿರುವ ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ, "ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ, ಹೀಗಾಗಿ ಹೇಗೆ ಮಾರಾಟವಾಗಬೇಕು" ಎಂದು ಪ್ರಶ್ನಿಸಿದ್ದಾರೆ.
"ಅಬಕಾರಿ ಇಲಾಖೆ ಕೇವಲ ಮದ್ಯ ಮಾತ್ರ ಪೂರೈಕೆ ಮಾಡುತ್ತದೆ, ಅದರಲ್ಲಿ ಹೆಚ್ಚು ಲಾಭವಿರುತ್ತದೆ. ಬಿಯರ್ ನಿಂದ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ, ಹಾಗಾಗಿ ಬಿಯರ್ ಪೂರೈಕೆ ಮಾಡುತ್ತಿಲ್ಲ, ನಾವು ಬಿಯರ್ ಪೂರೈಕೆ ಮಾಡಿ ಎಂದು ಕೇಳಿಕೊಂಡರೂ ಕಳುಹಿಸುತ್ತಿರಲಿಲ್ಲ" ಎಂದು ಬಾರ್ ಮಾಲೀಕರು ಹೇಳಿದ್ದಾರೆ.