ಬೆಂಗಳೂರು, ಡಿ 18 (Daijiworld News/PY) : ರಾಜ್ಯದಲ್ಲಿ ಇದೀಗ ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್ ಗಳ ಹೆಸರನ್ನು ಬದಲಾಯಿಸಲು ನಿರ್ಧಾರ ಮಾಡಿದ್ದು, 'ಮಹರ್ಷಿ ವಾಲ್ಮೀಕಿ ಅನ್ನ ಕುಟೀರ' ಎಂದು ಹೆಸರಿಡಲು ಮುಂದಾಗಿದ್ದು ಇದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು ಇಂದಿರಾ ಕ್ಯಾಂಟೀನ್ ಗಳಿಗೆ ಐತಿಹಾಸಿಕ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವ ಯೋಚನೆ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿಯವರ ಬಗ್ಗೆ ನಮಗೆಲ್ಲರಿಗೂ ಹೆಚ್ಚಿನ ಗೌರವ ಇದೆ, ಇದೀಗ ಬಿಜೆಪಿ ತನ್ನ ಕೆಟ್ಟ ರಾಜಕಾರಣಕ್ಕಾಗಿ ಮಹರ್ಷಿ ವಾಲ್ಮೀಕಿಯವರ ಹೆಸರನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಈಗ ಇಂದಿರಾ ಕ್ಯಾಂಟೀನ್ ಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಿರುವುದನ್ನು ನಾನು ವಿರೋಧಿಸುತ್ತೇನೆ, ಇಂತಹ ಮೋಸದ ರಾಜಕಾರಣವನ್ನು ಬೇಗನೇ ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿ 'ಮಹರ್ಷಿ ವಾಲ್ಮೀಕಿ ಅನ್ನ ಕುಟೀರ' ಎಂದು ಮರು ನಾಮಕರಣ ಮಾಡುವುದಾಗಿ ಮಾಜಿ ಸಚಿವ ರಾಜೂಗೌಡ ಅವರು ಮನವಿ ಮಾಡಿಕೊಂಡಿದ್ದಾರೆ. ಈಗ ಅವರ ಮನವಿಯನ್ನು ಪರಿಶೀಲಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚಿಸಿ ಬೆಂಗಳೂರನ್ನು ಹೊರತು ಪಡಿಸಿ ರಾಜ್ಯದ ಉಳಿದ ಸ್ಥಳಗಳಲ್ಲಿ ಹೆಸರು ಬದಲಾವಣೆ ಮಾಡುವಂತೆ ಚಿಂತನೆ ಮಾಡಲಾಗುವುದು ಎಂದು ಅಶೋಕ್ ಹೇಳಿದ್ದರು.