ಜೌರಂಗಬಾದ್, ಡಿ 18(Daijiworld News/MB) : ಮಹಿಳೆಯೊಬ್ಬರು ಕಬ್ಬಿನ ಗದ್ದೆಯಲ್ಲಿಯೇ ತನ್ನ 17ನೇ ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ಬೆಳಗಾವಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್ ಮೂಲದ ಲಂಕಾಬಾಯಿ(38) ಎಂಬ ಮಹಿಳೆಯು ಕೆಲಸಕ್ಕಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದು ಕೆಲಸ ಮಾಡುವ ವೇಳೆ ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ. ಆದರೆ ಮಗುವು ಆರೋಗ್ಯ ಸಮಸ್ಯೆಯಿಂದ ಹುಟ್ಟಿದ ಬಳಿಕ ಮೃತಪಟ್ಟಿದೆ.
ಅಲೆಮಾರಿ ಸಮುದಾಯದವರಾಗಿರುವ ಲಂಕಾಬಾಯಿ ಕುಟುಂಬ ಸದ್ಯ ಕರ್ನಾಟಕದಲ್ಲಿ ಕಬ್ಬಿನ ಕಟಾವಿನ ಸಮಯವಾಗಿದ್ದು, ಬೆಳಗಾವಿಯ ಕಬ್ಬಿನ ಗದ್ದೆಯೊಂದರಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬ ಕೆಲಸ ಮಾಡುತ್ತಿದ್ದರು.
ಆಕೆ ಕೆಲಸ ಮಾಡುತ್ತಿದ್ದಾಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಹಿಳೆ ಕಬ್ಬಿನ ಗದ್ದೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹುಟ್ಟಿದ ಬಳಿಕ ಮಗು ಸಾವನ್ನಪ್ಪಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಮಹಿಳೆಯು ಸೆಪ್ಟೆಂಬರ್ ತಿಂಗಳಿನಲ್ಲಿ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದು ಆಕೆ 20ನೇ ಬಾರಿಗೆ ಗರ್ಭ ಧರಿಸಿರುವ ಕುರಿತು ಆರೋಗ್ಯಾಧಿಕಾರಿಗಳು ಮಾಹಿತಿ ದಾಖಲಿಸಿಕೊಂಡಿದ್ದರು. ಈ ಮಹಿಳೆಗೆ ಈಗಾಗಲೇ ಒಟ್ಟು 11 ಮಕ್ಕಳಿದ್ದು, ಆ ಪೈಕಿ 9 ಹೆಣ್ಣು ಮಕ್ಕಳಾಗಿದ್ದಾರೆ. ಹಾಗೆಯೇ ಆಕೆಗೆ ೩ ಬಾರಿ ಗರ್ಭಪಾತವಾಗಿದ್ದು 5 ಮಗು ಸಾವನ್ನಪ್ಪಿದೆ ಎಂದು ಆರೋಗ್ಯಾಧಿಕಾರಿ ಡಾ. ಪವಾರ್ ಮಾಹಿತಿ ನೀಡಿದ್ದಾರೆ.
ನ.21ರಂದು ಮಹಿಳೆಯ ಆರೋಗ್ಯ ವಿಚಾರಿಸಲು ಅಧಿಕಾರಿಗಳು ಆಕೆಯ ಮನೆಗೆ ಭೇಟಿ ನೀಡಿದ್ದರು. ಆದರೆ ಕುಟುಂಬ ಸಮೇತ ಮಹಿಳೆ ಕರ್ನಾಟಕಕ್ಕೆ ವಲಸೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.