ಕೊಪ್ಪಳ, ಡಿ 18(Daijiworld News/MB) : ಬಿಜೆಪಿ ವಾಲ್ಮೀಕಿ ಸಮಾಜವನ್ನು ಓಟ್ ಬ್ಯಾಂಕ್ ಮಾಡಿಕೊಂಡಿದ್ದು ಮುಖ್ಯಮಂತ್ರಿ ಯುಡಿಯೂರಪ್ಪ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡದೆ ಅನ್ಯಾಯ ಮಾಡಿದ್ದಾರೆ ಎಂದು ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಚುನಾವಣಾ ಪೂರ್ವದಲ್ಲಿ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡುವ ಮಾತಾಗಿತ್ತು. ಆದರೆ ಸಿಎಂ ಬಿ.ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಲಿಲ್ಲ. ಈ ಹಿನ್ನಲೆಯಲ್ಲಿ ನಾನು ಅಂದೇ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಯಾರೇ ಆಗಲಿ ನನಗೆ ಒಂದೇ, ವಾಲ್ಮೀಕಿ ಸಮುದಾಯ ಹಾಗೂ ಸಮುದಾಯದ ಜನರೇ ನನಗೆ ಮುಖ್ಯ. ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ಈಗ ಡಿಸಿಎಂ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಹಾಗೂ ರಾಮುಲು ಇಬ್ಬರೂ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರಲ್ಲಿ ಯಾರಿಗೆ ಸ್ಥಾನ ಕೊಟ್ಟರೂ ಸಂತೋಷ. ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ನಮ್ಮ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಮತ ಬ್ಯಾಂಕ್ಗಾಗಿ ಎಲ್ಲರೂ ಕೀಳುಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ದ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ನಾನೇ ರಾಮುಲುಗೆ ಸ್ಪರ್ಧೆ ಮಾಡಬೇಡ, ಸಮಾಜ ಸಮಾಜದ ನಡುವೆ ವೈಮನಸ್ಸು ಬೆಳೆಯುತ್ತದೆ ಎಂದು ಹೇಳಿದ್ದೆ. ಆದರೆ ಇಂದು ಆ ಪರಿಸ್ಥಿತಿ ಎದುರಿಸುತ್ತಿದ್ದೇವೆ " ಎಂದರು.
ಸರಕಾರವು ಇಂದಿರಾ ಕ್ಯಾಂಟಿನ್ಗಳಿಗೆ ವಾಲ್ಮೀಕಿ ಹೆಸರಿಡಲು ಮುಂದಾಗಿದೆ. ಈ ನಿರ್ಧಾರವನ್ನು ನಾವು ಸ್ವಾಗತ್ತಿಸುತ್ತೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸರಕಾರ ಮುಂದಾದಂತೆ ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಅವರ ಹೆಸರಲ್ಲಿಯೂ ಮಂದಿರ ನಿರ್ಮಾಣ ಮಾಡಬೇಕು. ಹಾಗೆಯೇ ಹಂಪಿಯ ಕನ್ನಡ ವಿವಿಗೆ ವಾಲ್ಮೀಕಿ ಶ್ರೀ ಗಳ ನಾಮಕರಣ ಮಾಡಬೇಕು. ಬಜೆಟ್ನಲ್ಲಿ ಸಮಾಜದ ಪ್ರಗತಿಗೆ ಕೋಟಿಗಟ್ಟಲೇ ಹಣ ಇಡ್ತಾರೆ. ಆದರೆ ಅದೆಲ್ಲ ಮಧ್ಯವರ್ತಿಗಳ ಪಾಲಾಗುತ್ತಿದೆ "ಎಂದು ಹೇಳಿದ್ದಾರೆ.